ADVERTISEMENT

‘ಜೈವಿಕ ಉದ್ಯಾನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:51 IST
Last Updated 8 ಫೆಬ್ರುವರಿ 2017, 9:51 IST

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಆದಷ್ಟು ಶೀಘ್ರ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಜನಸಂಗ್ರಾಮ ಪರಿಷತ್‌ ಆಗ್ರಹಿಸಿದೆ.

ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಶಿವಕುಮಾರ ಮಾಳಗಿ ನೇತೃತ್ವದ ನಿಯೋಗ ಮಂಗಳವಾರ ವಾಜಪೇಯಿ ಉದ್ಯಾನಕ್ಕೆ ಭೇಟಿ ನೀಡಿದ್ದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ ಅವರನ್ನು ಕಂಡು ಮನವಿ ಸಲ್ಲಿಸಿತು.

2010ರಲ್ಲಿ ಜೈವಿಕ ಉದ್ಯಾನಕ್ಕೆ ₹ 34 ಕೋಟಿ ನಿಗದಿಯಾಗಿತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ಕೇವಲ ₹ 20 ಕೋಟಿ ಬಿಡುಗಡೆ ಆಗಿದೆ. ಇದರಿಂದ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಕೂಡಲೇ ಉಳಿದ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಮುಗಿಸಬೇಕು ಎಂದು ಒತ್ತಾಯಿಸಿದರು.

ಉದ್ಯಾನವನದಲ್ಲಿ ಸ್ಥಳೀಯ ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಮೀಸಲಿಡಬೇಕು. ಪಾರಂಪರಿಕ ಅರಣ್ಯ ವಾಸಿಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಬಾಕಿ ವೇತನ ಶೀಘ್ರ ಬಿಡುಗಡೆ ಮಾಡುವುದು ಪ್ರಮುಖ ಬೇಡಿಕೆಗಳಾಗಿವೆ.
ಸೊಸೈಟಿ ಕಾಳಪ್ಪ, ಹಿರೇಕೇರಿ ಸಿದ್ದಪ್ಪ, ಮೀಸಲು ನಾಗಯ್ಯ, ಮುಸ್ತಫಾ ನಾಯಕ, ದುರ್ಗಪ್ಪ ನಿಯೋಗದಲ್ಲಿ ಇದ್ದರು.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಭೇಟಿ
ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ ಅವರು ಮಂಗಳವಾರ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉದ್ಯಾನದ ಪರಿಸರದಲ್ಲಿ ನಿರ್ಮಿಸಿರುವ ಕೆರೆ, ಉದ್ಯಾನ, ಸಫಾರಿ ಸ್ಥಳ ಸೇರಿದಂತೆ ಇತರ ಕಾಮಗಾರಿಗಳನ್ನು ವೀಕ್ಷಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪುರುಷೋತ್ತಮ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಭು ಗೊರವರ, ಅರಣ್ಯಾಧಿಕಾರಿಗಳಾದ ರಮೇಶ ಗಾಣಿಗೇರ, ಕೆ. ಪರಮೇಶ, ಎಂಜಿನಿಯರ್‌ ಸಮದ್‌ ಖಾನ್‌ ಉಪಸ್ಥಿತರಿದ್ದರು.c

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT