ADVERTISEMENT

ಡೈರಿಯಲ್ಲಿ ಶಾಸಕರ ಹೆಸರು ನಾಪತ್ತೆ !

ಜಿಲ್ಲಾ ಪಂಚಾಯಿತಿಯಿಂದ ಪ್ರಕಟ; ಹೊಸ ಮಾಹಿತಿ ಮುದ್ರಿಸುವಲ್ಲಿ ತಾರತಮ್ಯ

ಕೆ.ನರಸಿಂಹ ಮೂರ್ತಿ
Published 22 ಏಪ್ರಿಲ್ 2017, 7:41 IST
Last Updated 22 ಏಪ್ರಿಲ್ 2017, 7:41 IST
ಡೈರಿಯಲ್ಲಿ ಶಾಸಕರ ಹೆಸರು ನಾಪತ್ತೆ !
ಡೈರಿಯಲ್ಲಿ ಶಾಸಕರ ಹೆಸರು ನಾಪತ್ತೆ !   
ಬಳ್ಳಾರಿ: ಇಲ್ಲಿನ ಜಿಲ್ಲಾ ಪಂಚಾಯಿತಿಯು ಸದಸ್ಯರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ನೀಡಲೆಂದು ಪ್ರಕಟಿಸಿರುವ 2017ರ ಡೈರಿಯಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್‌ ಅವರ ಹೆಸರು ನಾಪತ್ತೆಯಾಗಿದೆ.
 
ಅದರ ಜೊತೆಗೆ, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ಮಾಹಿತಿಯನ್ನು ನೀಡುವಲ್ಲಿಯೂ ಲೋಪಗಳು ಕಂಡುಬಂದಿವೆ.
 
ಇತ್ತೀಚೆಗೆ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಡೈರಿ ಮತ್ತು ಕ್ಯಾಲೆಂಡರ್‌ಗಳನ್ನು ಸದಸ್ಯರಿಗೆ ವಿತರಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪರಿಶೀಲನೆ ನಡೆಸಿದಾಗ, ಹೊಸ ಮಾಹಿತಿಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂತು.
 
ಜಿಲ್ಲೆಯ ಇಬ್ಬರು ಸಂಸದರು, 12 ಶಾಸಕರು ಹಾಗೂ ಪಂಚಾಯಿತಿ ಸದಸ್ಯರ ಚಿತ್ರಗಳನ್ನು ಡೈರಿಯಲ್ಲಿ ಪ್ರಕಟಿಸಲಾಗಿದೆ. ಆ ಪುಟಗಳಲ್ಲಿ ಶಾಸಕ ಆನಂದ್‌ಸಿಂಗ್‌ ಅವರ ಚಿತ್ರವೂ ಇದೆ. ಆದರೆ ಹೆಸರುಗಳ ಪಟ್ಟಿಯಲ್ಲಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆ ನಾಪತ್ತೆಯಾಗಿದೆ.
 
ತಾರತಮ್ಯ: ಕೆಲವು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಡಿಡಿಪಿಐ ಎ.ಶ್ರೀಧರನ್‌ ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. 
 
ಆದರೆ ಹಿಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರ ಹೆಸರನ್ನು ಕೈಬಿಡಲಾಗಿದೆ. ಅದೇ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುರೇಶ ಬಾಬು ಅವರನ್ನು ಸಹಾಯಕ ನಿರ್ದೇಶಕರು ಎಂದು ಉಲ್ಲೇಖಿಸಲಾಗಿದೆ!
 
ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಹಿಂದಿನ ವರ್ಷ ಕೆಲವು ತಿಂಗಳು ವರ್ಗಾವಣೆಯಾಗಿದ್ದರು. ಈಗ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಮಾಹಿತಿಯೂ ಡೈರಿಯಲ್ಲಿದೆ.
 
ಪ್ರಮುಖ ನಿಯತಕಾಲಿಕೆಗಳ ಪ್ರತಿನಿಧಿಗಳ ಹೆಸರುಗಳು ತಪ್ಪಾಗಿವೆ. ಎರಡು ಪತ್ರಿಕೆಗೆ ಒಂದೇ ಪತ್ರಿಕೆಯ ಇಮೇಲ್‌ ಐಡಿಯನ್ನು ಕೂಡ ನೀಡಲಾಗಿದೆ. ‘ಪ್ರಜಾವಾಣಿ’ಯ ಇಮೇಲ್‌ ಐಡಿ ಬದಲಿಗೆ  ಸಂಜೆ ಪತ್ರಿಕೆಯೊಂದರ ಇಮೇಲ್‌ ಐಡಿಯನ್ನೇ ಮುದ್ರಿಸಲಾಗಿದೆ. ಪತ್ರಿಕಾ ಕಚೇರಿಗಳ ಬದಲಾದ ವಿಳಾಸಗಳ ಬದಲಿಗೆ ಹಳೇ ವಿಳಾಸಗಳನ್ನೇ ಮುದ್ರಿಸಲಾಗಿದೆ.
 
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಅಧೀಕ್ಷಕ ಕೆ.ನರಸಿಂಹಮೂರ್ತಿ, ‘ತಪ್ಪುಗಳಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮಾಧ್ಯಮದ ಪಟ್ಟಿಯನ್ನು ವಾರ್ತಾ ಇಲಾಖೆಯಿಂದ ಪಡೆದು ಮುದ್ರಿಸಲಾಗಿದೆ’ ಎಂದರು.
 
ನಿರಾಕರಣೆ: ಅವರ ಮಾತನ್ನು ಅಲ್ಲಗೆಳೆದಿರುವ ರಾಮಲಿಂಗಪ್ಪ, ‘ಕಳೆದ ವರ್ಷ ಮಾರ್ಚ್‌ನಿಂದ ಇಲ್ಲಿವರೆಗೆ ಜಿಲ್ಲಾ ಪಂಚಾಯಿತಿಯು ಮಾಧ್ಯಮ ಪ್ರತಿನಿಧಿಗಳ ಮಾಹಿತಿಯನ್ನು ನಮ್ಮ ಕಚೇರಿಯಿಂದ ಪಡೆದಿಲ್ಲ. ಪಡೆದಿದ್ದರೆ, ನನ್ನ ಹೆಸರನ್ನು ಬಿಟ್ಟು, ನಮ್ಮ ಕಚೇರಿಯ ಪ್ರಥಮ ದರ್ಜೆ ಸಹಾಯಕರ ಹೆಸರನ್ನು ಸಹಾಯಕ ನಿರ್ದೇಶಕರೆಂದು ಮುದ್ರಿಸುವ ಪ್ರಮಾದ ನಡೆಯುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
***
ಡೈರಿ ಮುದ್ರಿಸಿದ್ದು ಯಾವಾಗ?
ಮಾಹಿತಿಯ ಲೋಪಗಳನ್ನು ಗಮನಿಸಿದರೆ, ಈ ಡೈರಿಯನ್ನು ಮುದ್ರಿಸಿದ್ದು ಯಾವಾಗ? ಮಾಹಿತಿ ಸಂಗ್ರಹಿಸಿದ್ದು ಹಾಗೂ ಅಧಿಕೃತ ಎಂದು ನಿರ್ಧರಿಸಿದ್ದು ಯಾರು ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ ಆ ಬಗ್ಗೆ ಖಚಿತ ಮಾಹಿತಿ ಪಂಚಾಯಿತಿಯಲ್ಲಿ ಲಭ್ಯವಿಲ್ಲ.

2015ರಲ್ಲಿ ಪಂಚಾಯಿತಿ ಡೈರಿಯನ್ನು ಮುದ್ರಿಸಿತ್ತು. ನಂತರದ ವರ್ಷ ಮುದ್ರಿಸಿರಲಿಲ್ಲ. ಎರಡು ವರ್ಷದ ಬಳಿಕ ಈಗ ಮುದ್ರಣವಾಗಿರುವ ಡೈರಿಯಲ್ಲಿ ಹಲವು ಲೋಪಗಳಿವೆ.
***
ಡೈರಿಯಲ್ಲಿ ಕಂಡುಬಂದಿರುವ ಲೋಪಗಳನ್ನು ಪರಿಶೀಲಿಸಲಾಗುವುದು. ಅಗತ್ಯ ಕಂಡರೆ ಮರುಮುದ್ರಣ ಮಾಡಲಾಗುವುದು
ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.