ADVERTISEMENT

ತಾಲ್ಲೂಕು ಘೋಷಣೆಗೆ ಆಗ್ರಹ

ಪ್ರತಿಭಟನೆಯ ಎಚ್ಚರಿಕೆ ನೀಡಿದ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:32 IST
Last Updated 16 ಜನವರಿ 2017, 8:32 IST

ಕಂಪ್ಲಿ: ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಅನುಷ್ಠಾನಗೊಳಿಸದಿದ್ದಲ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟ ಸಮಿತಿಯ ಪ್ರತಿಭಟನೆಯಲ್ಲಿ ಪಾಲ್ಗೊ­ಳ್ಳಬೇಕು ಎಂದು ಕಂಪ್ಲಿ ತಾಲ್ಲೂಕು ಯುವ ಹೋರಾಟ ಸಮಿತಿ ಅಧ್ಯಕ್ಷ ಕರೆಕಲ್ ಶಂಕ್ರಪ್ಪ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ಕಂಪ್ಲಿ ಒಳಗೊಂಡಂತೆ 43 ಹೊಸ ತಾಲ್ಲೂಕು ಘೋಷಿಸಿದ್ದರು. ಆದರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಈಚೆಗೆ 33 ತಾಲ್ಲೂಕುಗಳನ್ನು ಅನುಷ್ಠಾನಕ್ಕೆ ತರುವುದಾಗಿ
ಹೇಳಿಕೆ ನೀಡಿದ್ದಾರೆ. ಈ 33 ತಾಲ್ಲೂಕುಗಳ ಪಟ್ಟಿಯಲ್ಲಿ ಕಂಪ್ಲಿ ಹೆಸರು ಕೈಬಿಡಲಾಗಿದೆ ಎನ್ನುವ ವದಂತಿ ಹೋಬಳಿ ವ್ಯಾಪ್ತಿಯಲ್ಲಿ ಹಬ್ಬಿದ್ದು, ಜನತೆ ಅಸಮಾಧಾನ­ಗೊಂಡಿದ್ದಾರೆ ಎಂದು ಹೇಳಿದರು.

ಕಂಪ್ಲಿ ತಾಲ್ಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ಕೆಲವರ ಕುತಂತ್ರದಿಂದ ಈ ಹಿಂದೆಯೂ ತಾಲ್ಲೂಕು ಸ್ಥಾನಮಾನದಿಂದ ವಂಚಿತ­ವಾಗಿತ್ತು. ನಂತರ ಹೋರಾಟದ ಪ್ರತಿ­ಫಲ­ವಾಗಿ ಬಿಜೆಪಿ ಸರ್ಕಾರ ತಾಲ್ಲೂಕು ಕೇಂದ್ರ ಎಂದು ಘೋಷಿಸಿದ್ದರೂ ಬಳ್ಳಾರಿ, ಹೊಸಪೇಟೆ ಭಾಗದ ರಾಜ­ಕೀಯ ಮುಖಂಡರು ಕಂಪ್ಲಿ ಹಣೆ ಬರಹ ನಿರ್ಧರಿಸುವುದರಿಂದ ಮತ್ತೊಮ್ಮೆ ತಾಲ್ಲೂಕು ಸ್ಥಾನದಿಂದ ವಂಚಿತವಾಗುವ ಎಲ್ಲಾ ಲಕ್ಷಣ ಗೋಚರಿಸುತ್ತಿವೆ ಎಂದು ಹೇಳಿದರು.

ಶಾಸಕರಾಗಿ ಎರಡನೇ ಅವಧಿಗೆ ಆಯ್ಕೆಗೊಂಡ ಟಿ.ಎಚ್. ಸುರೇಶ್‌ಬಾಬು ಹಾಗೂ ಎಂಎಲ್‌ಸಿ ಅಲ್ಲಂ ವೀರಭದ್ರಪ್ಪ ಅವರು ಕುರುಗೋಡು, ಕಂಪ್ಲಿಯನ್ನು ತಾಲ್ಲೂಕು ಕೇಂದ್ರವಾಗಿ ರಚಿಸುವುದಾಗಿ ಭರವಸೆ ನೀಡುತ್ತಾ ಕುರುಗೋಡು ಪಟ್ಟಣಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಕಂಪ್ಲಿ ಜನತೆ ಯಾವುದೇ ರಾಜಕೀಯ ಕುತಂತ್ರಕ್ಕೆ ಬಲಿಯಾಗುವುದಿಲ್ಲ. ಶತಾಯಗತಾಯ ತಾಲ್ಲೂಕು ಸ್ಥಾನಮಾನ ಸಿಗುವವರೆಗೂ ಎಲ್ಲರ ಸಹಕಾರದೊಂದಿಗೆ ಸಮಿತಿ ಹೋರಾಟ ನಡೆಸಲಿದೆ ಎಂದು ಹೇಳಿದರು. ಕಂಪ್ಲಿ ತಾಲ್ಲೂಕು ಯುವ ಹೋರಾಟ ಸಮಿತಿ ಕಾರ್ಯದರ್ಶಿ ಇಟಗಿ ವಿರೂಪಾಕ್ಷಿ, ಸಂಚಾಲಕ ಎಸ್. ಸಿದ್ದಲಿಂಗಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.