ADVERTISEMENT

ತುಂಗಭದ್ರಾ ಜಲಾಶಯ ಹೂಳು ತೆರವು ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಮೇ 2017, 8:45 IST
Last Updated 18 ಮೇ 2017, 8:45 IST

ಬಳ್ಳಾರಿ: ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ಪ್ರಾಯೋಗಿಕ ಕಾರ್ಯಾಚರಣೆ ಗುರುವಾರದಿಂದ ಆರಂಭವಾಗಲಿದ್ದು, ಮೊದಲಿಗೆ 100 ಟ್ರ್ಯಾಕ್ಟರ್‌ ಹಾಗೂ 10 ಯಂತ್ರವಾಹನಗಳನ್ನು ಬಳಸಲು ರೈತ ಸಂಘ ನಿರ್ಧರಿಸಿದೆ.

‘ಜಲಾಶಯದ ನೀರು ಬಳಸುವ ಬಳ್ಳಾರಿ ಜಿಲ್ಲೆಯ ರೈತರೊಂದಿಗೆ ರಾಯಚೂರು, ಕೊಪ್ಪಳ ಜಿಲ್ಲೆಯ ರೈತರೂ ಸಹಮತ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವವರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ತಿಳಿಸಿದ್ದಾರೆ.

ನಾಲ್ಕು ಪ್ರದೇಶ: ‘ಹೂಳು ತೆಗೆಯುವುದರಿಂದ ಜಲಾಶಯ ಕಟ್ಟಡಕ್ಕೆ ತೊಂದರೆಯಾಗಬಾರದು ಎಂದು ತುಂಗಭದ್ರಾ ಮಂಡಳಿಯು ಎಚ್ಚರಿಕೆ ನೀಡಿರುವುದರಿಂದ ಜಲಾಶಯದಿಂದ ದೂರವಿರುವ ವ್ಯಾಸನಕೆರೆ, ಡಣಾಯನಕೆರೆ, ಲೋಕಪ್ಪನ  ಕೆರೆ, ಹಂಪನಕಟ್ಟೆ ಸಮೀಪದ ಹೂಳು ತೆಗೆಯಲಾಗುವುದು. 18ರಂದು ವ್ಯಾಸನಕೆರೆ ಹತ್ತಿರ ಪ್ರಾಯೋಗಿಕವಾಗಿ ಹೂಳನ್ನು ತೆಗೆಯಲು ನಿರ್ಧರಿಸಲಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರ ಜೀವನಾಡಿಯಾಗಿರುವ ಈ ಜಲಾಶಯದಲ್ಲಿ 32 ಟಿ.ಎಂ.ಸಿ ಅಡಿಯಷ್ಟು ಹೂಳು ತುಂಬಿಕೊಂಡಿರುವುದರಿಂದ, ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಸಾಮರ್ಥ್ಯ ಕಡಿಮೆಯಾಗುತ್ತಲೇ ಇದೆ. ಆದರೆ ಪರ್ಯಾಯದ ಕುರಿತು ಎರಡೂ ರಾಜ್ಯ ಸರ್ಕಾರಗಳು ಚಿಂತಿಸಿಲ್ಲ’ ಎಂದು ಅವರು ದೂರಿದರು.

‘ಮಳೆ ಅಭಾವದ ಕಾರಣ, ಎರಡು ವರ್ಷದಿಂದ ಎರಡನೇ ಬೆಳೆಗೆ ನೀರು ಪೂರೈಸದ ಪರಿಸ್ಥಿತಿ ಉಂಟಾಗಿದೆ. ಡೆಡ್‌ ಸ್ಟೋರೇಜ್‌ನಲ್ಲಿರುವ ನೀರನ್ನೂ ಬಳಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಪ್ರತಿ ವರ್ಷ  ಮಾರ್ಚ್‌ನಿಂದ ಮೇವರೆಗೆ ಕಾರ್ಯಾಚರಣೆ ನಡೆಸಿದರೆ ಕನಿಷ್ಠ 6 ಟಿ.ಎಂ.ಸಿ ಅಡಿಯಷ್ಟು ಹೂಳನ್ನು ತೆಗೆಯಬಹುದು. ಅದರಿಂದ ಪರಿಸ್ಥಿತಿ ಸುಧಾರಿಸಿ, ಎರಡನೇ ಬೆಳೆಗೆ ನೀರು ಪೂರೈಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

**

ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯುವುದು ಅಸಾಧ್ಯ ಎಂಬ ಆಕ್ಷೇಪಣೆಯ ನಡುವೆಯೇ ಗುರುವಾರದಿಂದ ಕಾರ್ಯಾಚರಣೆ ಆರಂಭವಾಗಲಿದೆ.
–ಜಿ.ಪುರುಷೋತ್ತಮಗೌಡ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.