ADVERTISEMENT

ದೊಡ್ಡಬಸವೇಶ್ವರ ಮಹಾರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 7:23 IST
Last Updated 6 ಮಾರ್ಚ್ 2015, 7:23 IST

ಕುರುಗೋಡು: ಗುರುವಾರ ಸಂಜೆ ಜರುಗಿದ ಇತಿಹಾಸ ಪ್ರಸಿದ್ದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ರಥ ಮತ್ತು ದೊಡ್ಡಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿ ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು.

ದೇವಸ್ಥಾನದಲ್ಲಿ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತು ದೊಡ್ಡಬಸವೇಶ್ವರ ಸ್ವಾಮಿ ಸಮೀಪ ದರ್ಶನ ಪಡೆದರು.

ಸಂಜೆ 60ಅಡಿ ಎತ್ತರದ ವಿವಿಧ ಬಣ್ಣ ಬಣ್ಣದ ಹೂಗಳು ಮತ್ತು ಅಲಂಕಾರಿಕ ವಸ್ತುಗಳು ಮತ್ತು ಗೊಂಬೆಗಳಿಂದ ಅಲಂಕೃತಗೊಂಡಿದ್ದ ರಥವನ್ನು  ಎದುರುಬಸವಣ್ಣ ದೇವಸ್ಥಾನದ ವರೆಗೆ ಎಳೆದೊಯ್ದ ಭಕ್ತರು ಮತ್ತೆ ಸ್ವಸ್ಥಳಕ್ಕೆ ಎಳೆದುತಂದರು.

ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರು ರಥಕ್ಕೆ ಹೂ ಹಣ್ಣು ಎಸೆದು ಕೃತಾರ್ಥರಾದರು.

ಜಿಲ್ಲೆಯ ವಿವಿಧ ತಾಲ್ಲೂಕು ಸೇರಿದಂತೆ ನೆರೆಯ ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆ ಮತ್ತು ಆಂಧ್ರದ ಕೆಲವು ಪ್ರದೇಶಗಳಿಂದ ಬಂದಿದ್ದ ಭಕ್ತರು ರಥಬೀದಿಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ರಥದ ಸಮೀಪ ದರ್ಶನ ಪಡೆದು ಪುನೀತರಾದರು.

ಸಂಪ್ರದಾಯ ಪಾಲನೆ: ರಥದ ಕಳಸ ನೋಡಬೇಕು ಎನ್ನುವ ಸಂಪ್ರದಾಯಕ್ಕೆ ಕಟ್ಟುಬಿದ್ದ ನೂರಾರು ನವಜೋಡಿಗಳು ರಥೋತ್ಸವದಲ್ಲಿ ಭಾಗವಹಿಸಿ ಕೈಕೈಹಿಡಿದು ಜಾತ್ರೆಯಲ್ಲಿ ಸುತ್ತುತ್ತಿದ್ದ ದೃಶ್ಯ ಕಂಡುಬಂತು. 
    
ವ್ಯವಸ್ಥೆ: ಸ್ಥಳೀಯ ನಿವಾಸಿಗಳಾದ  ಎ.ಲೋಕಣ್ಣ, ಎ. ಗಿರೀಶ್, ಚಂದಾ ಶರಣಬಸವ  ಸ್ನೇಹ­ಬಳಗದ ವತಿಯಿಂದ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಉಚಿತ ತಂಪು ಮಜ್ಜಿಗೆ ವಿತರಿಸಿದರು. ಬಾದನಹಟ್ಟಿ ರಸ್ತೆಯಲ್ಲಿ ಕೆ.ನಾರಾಯಣಪ್ಪ ಭಕ್ತರಿಗೆ ಉಚಿತ ಮಜ್ಜಿಗೆ ವಿತರಿಸಿದರು.  

ರೈತ ಸಮುದಾಯ ಭವನ, ರಾಘ­ವಾಂಕ ಶ್ರೀಗಳ ಮಠ, ಸುಂಕಲಮ್ಮದೇವಿ ದೇವಸ್ಥಾನ, ಕಲ್ಲುಗುಡೇಶ್ವರ ದೇವ­ಸ್ಥಾನ, ಕೋಟೆ ಆಂಜನೇಯಸ್ವಾಮಿ ದೇವ­ಸ್ಥಾನ, ಮದಿರೆ ಕ್ರಾಸ್ ಬಳಿಯ ಆಂಜನೇಯಸ್ವಾಮಿ ದೇವಸ್ಥಾನ, ಬಾದ­ನ­ಹಟ್ಟಿಯ ಮೂರು ದೇವಸ್ಥಾನಗಳಲ್ಲಿ ಜಾತ್ರೆಯ ನಿಮಿತ್ತ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಳೆದ ವರ್ಷ ರಥೋತ್ಸವದ ಸಂದರ್ಭದಲ್ಲಿ ನಡೆದಿದ್ದ ಗುಂಪು ಘರ್ಷಣೆಯ ಸನ್ನಿವೇಶದ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಬಳ್ಳಾರಿ ಗ್ರಾಮೀಣ ವಲಯದ ಡಿವೈಎಸ್ಪಿ ರುದ್ರಮುನಿ, ಸ್ಥಳೀಯ ಪೊಲೀಸ್ ವೃತ್ತನಿರೀಕ್ಷಕ ಲಕ್ಷ್ಮೀಕಾಂತಯ್ಯ, ಪಿಎಸ್ಐ ಚನ್ನಯ್ಯ ಹಿರೇಮಠ ಮತ್ತು ಸಿಬ್ಬಂದಿ ರಥೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.