ADVERTISEMENT

ಪಟ್ಟಣ ಪಂಚಾಯ್ತಿಗೆ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:28 IST
Last Updated 18 ಜುಲೈ 2017, 7:28 IST

ಮರಿಯಮ್ಮನಹಳ್ಳಿ: ಸ್ಥಳಿಯ ಪಟ್ಟಣ ಪಂಚಾಯ್ತಿ ಕಾರ್ಯಾಲಯ ಸಂಪೂರ್ಣ ಸಿ.ಸಿ.ಟಿ.ವಿ ಕ್ಯಾಮೆರಾದ ಕಣ್ಗಾವಲಿನಲ್ಲಿದೆ. ಕಚೇರಿ ಹೊರ ಆವರಣ, ಮುಖ್ಯಾಧಿ ಕಾರಿ ಕೊಠಡಿ, ಅಧ್ಯಕ್ಷ, ಉಪಾದ್ಯಕ್ಷರ ಕೊಠಡಿ ಹಾಗೂ ಸಿಬ್ಬಂದಿಯ ಎರಡು ಕೊಠಡಿ ಸೇರಿ ಏಳು ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕಳೆದ ವರ್ಷ ಪಟ್ಟಣ ಪಂಚಾಯ್ತಿ ಕಚೇರಿಯ ಮುಖ್ಯದ್ವಾರದ ಬೀಗ ಮುರಿದಿದ್ದ ದುಷ್ಕರ್ಮಿಗಳು ಬೀದಿ ದೀಪದ ಸಂಪರ್ಕ ಹಾಗೂ ಕಟ್ಟಡದ ಮೇಲಿನ ಸೋಲಾರ್‌ ಇಂಟರ್‌ ನೆಟ್‌ ಸಂಪರ್ಕದ ವೈರ್‌ಗಳನ್ನು ತುಂಡರಿಸಿ, ಮುಂದಿನ ಎರಡು ಬಾಗಿಲುಗಳ ಬೀಗ ಮುರಿದು ಮಹತ್ವದ ದಾಖಲೆಗಳನ್ನು ಒಳಗೊಂಡಿದ್ದ ₹40ಸಾವಿರ ಮೌಲ್ಯದ ಕಂಪ್ಯೂಟರ್‌ ಮತ್ತು ಒಂದು ಪ್ರಿಂಟರ್‌ ಕದ್ದಿದ್ದರು.

ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದರೂ ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ. ಈಚೆಗೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಅನುಮೋದನೆ ಪಡೆದು ಪಟ್ಟಣ ಪಂಚಾಯ್ತಿ ನಿಧಿಯಲ್ಲಿ ಸುಮಾರು ₹30ಸಾವಿರ ವೆಚ್ಚದಲ್ಲಿ ಏಳು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮಖ್ಯಾಧಿಕಾರಿ ನಾಗರಾಜ್‌ ನಾಯ್ಕ್‌ ತಿಳಿಸಿದರು.

ADVERTISEMENT

ಪ್ರತಿಯೊಂದು ಕೊಠಡಿ ಹಾಗೂ ಆವರಣದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಲಿವೆ.  ಇದರಿಂದ ಪಾರದರ್ಶಕ ಆಡಳಿತಕ್ಕೂ ಅನುಕೂಲ ಆಗಲಿದೆ ಎನ್ನುತ್ತಾರೆ ಅವರು. ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ನೋಡಿಕೊಳ್ಳಲು ಸಿ.ಸಿ.ಟಿ.ವಿ. ಕ್ಯಾಮೆರಾಗಳು ನೆರವಾಗಲಿವೆ. ಕಚೇರಿಯ ಭದ್ರತೆ ದೃಷ್ಟಿಯಿಂದ ಇವು ಅನುಕೂಲಕರವಾಗಿವೆ ಎಂದು ಅಧ್ಯಕ್ಷೆ ರೇಣುಕಾ ಕೆ.ಎಚ್‌.ನಾಯ್ಕ್‌ ಹಾಗೂ ಉಪಾಧ್ಯಕ್ಷ ಬಂಗಾರಿ ಮಂಜುನಾಥ್ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.