ADVERTISEMENT

ಬೆಂಕಿ ಅವಘಡ: 28 ಗುಡಿಸಲು ಭಸ್ಮ

​ಪ್ರಜಾವಾಣಿ ವಾರ್ತೆ
Published 26 ಮೇ 2017, 10:03 IST
Last Updated 26 ಮೇ 2017, 10:03 IST

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮ್ ರಹೀಮ್‌ ನಗರದಲ್ಲಿ ಗುರುವಾರ ಬೆಂಕಿ ಅವಘಡದಿಂದಾಗಿ 28 ಗುಡಿಸಲುಗಳು ಸಂಪೂರ್ಣ ಭಸ್ಮಗೊಂಡಿವೆ. ಏಕಾಏಕಿ ಮನೆಯೊಂದಕ್ಕೆ ಮಧ್ಯಾಹ್ನ 1.30ರಲ್ಲಿ ಬೆಂಕಿ ಬಿದ್ದಿದ್ದು ಕಾಣಿಸಿಕೊಂಡಿತು. ಗಾಳಿ ಇದ್ದ ಕಾರಣ 10 ನಿಮಿಷಗಳಲ್ಲೇ ಆಸುಪಾಸಿನಲ್ಲಿದ್ದ ಗುಡಿಸಲಿಗಳಿಗೆ ಬೆಂಕಿ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಮನೆಗಳಲ್ಲಿದ್ದ ದವಸ ಧಾನ್ಯಗಳು, ಉಡುಗೆ ಬಟ್ಟೆಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಗೃಹಪಯೋಗಿ ವಸ್ತುಗಳು, ಮಾರಟಕ್ಕೆಂದು ತಂದಿದ್ದ ಛತ್ರಿಗಳು, ಕೊಡಗಳು, ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳು ಬೆಂಕಿಗೆ ಆಹುತಿಯಾಗಿದೆ. ಇದರಿಂದಾಗಿ ₹ 50 ಲಕ್ಷಕ್ಕೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದರೂ ಆ ವೇಳೆಗೆ ಗುಡಿಸಲುಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿದ್ದವು. ಸ್ಥಳದಲ್ಲಿ ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು.

ನಗದು ಬೆಂಕಿಗೆ ಆಹುತಿ: ಶಂಕ್ರಮ್ಮ ಎನ್ನುವವರು ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಸಹಾಯ ಸಂಘದಿಂದ ₹ 50 ಸಾವಿರ ಸಾಲ ತಂದು ಮನೆಯಲ್ಲಿಟ್ಟಿದ್ದರು. ಈ ಅವಘಡದಲ್ಲಿ ಎಲ್ಲ ನೋಟುಗಳು ಬೆಂಕಿಗೆ ಆಹುತಿಯಾಗಿದೆ.

ADVERTISEMENT

ಮಹಿಳೆಯರ ರೋದನ: ‘ಅಲ್ಲಿಲ್ಲಿ ₹ 50 ಸಾವಿರ ಸಾಲ ಸೋಲಮಾಡಿ ಮಾರಾಟ ಮಾಡಲು ಪ್ಲಾಸ್ಟಿಕ್ ಕೊಡಗಳು, ಛತ್ರಿಗಳನ್ನು ಖರೀದಿಸಿ ತಂದು ಮನೆಯಲ್ಲಿ ಇಟ್ಟಿದ್ವಿ ಎಲ್ಲ ಸುಟ್ಟು ಹೋದ್ವು, ಬದುಕೋಕೆ ಏನೂ ಇಲ್ಲ, ಮಕ್ಕಳನ್ನು ಕಟ್ಟಿಕೊಂಡು ಹೇಗೆ ಜೀವನ ಮಾಡಬೇಕು’ ಎಂದು ಮನೆಯನ್ನು ಕಳೆದುಕೊಂಡ ಅಂಬಕ್ಕ ರೋದಿಸುತ್ತಿದ್ದ ದೃಶ್ಯವಂತೂ ಅಲ್ಲಿದ್ದವರ ಮನ ಕಲಕಿತು.

ಮನೆಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ದೊಡ್ಡ ಯಲ್ಲಮ್ಮ, ಕೊರವರ ಚನ್ನಮ್ಮ, ಜೋಗೇರ್ ನಿರ್ಮಲ, ಖಾಸೀಯಾಬಿ, ಡಿ.ಶಂಕ್ರಮ್ಮ, ಹುಸೇನಿಬೀ, ಅಬ್ದುಲ್‌, ಕೆ.ಅಂಬಮ್ಮ, ಕೆ.ಕಾಳಮ್ಮ,  ಅಂಬಮ್ಮ, ಜಗದೀಶ್, ಕೆ.ನಾಗರಾಜ, ಕಡ್ಲಬಾಳು ಮಾಬುಸಾಹೇಬ್, ಪಕೃಮಾಬೀ, ನೂರ್‌ಜಾನ್‌, ರಜಿಯಾಬೇಗಂ, ಕೆ.ಮಾಬುನ್ನಿ, ಪರ್ವೀನ್‌, ನೀಲಮ್ಮ, ನಿರ್ಮಲ, ಆಶಾ, ಜೆ. ಸಂಜನಾ, ಶಂಷಾದ್ ಬೇಗಂ, ಭಾಗ್ಯಮ್ಮ, ಲಕ್ಷ್ಮೀದೇವಿ, ಆಫ್ರೀನ್‌ ಮತ್ತು ಇತರರು ವಾಸ್ತವ್ಯಕ್ಕಿದ್ದ ಮನೆಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಆನಂದಪ್ಪ ನಾಯಕ, ಪುರಸಭೆ ಉಪಾಧ್ಯಕ್ಷೆ ಬಲ್ಲಾಹುಣ್ಸಿ ಹುಲಿಗೆಮ್ಮ, ಮುಖ್ಯಾಧಿಕಾರಿ ಪ್ರಕಾಶ್‌ ಚನ್ನಪ್ಪನವರ್‌, ಆರೋಗ್ಯಾಧಿಕಾರಿ ಮಲ್ಲಯ್ಯ ಹಿರೇಮಠ್‌ ಇತರರು ಇದ್ದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದರು.

ಗಂಜಿ ಕೇಂದ್ರ: ಬೆಂಕಿ ಆಕಸ್ಮಿಕದಿಂದಾಗಿ ಮನೆಗಳೆಲ್ಲಾ ಸುಟ್ಟಿರುವುದರಿಂದ ನಗರದ 125 ಮಂದಿ ಸಂತ್ರಸ್ತರಾಗಿದ್ದಾರೆ, ಅವರಿಗೆ ತಾತ್ಕಾಲಿಕವಾಗಿ ಕಾಲೇಜ್ ಹಾಸ್ಟೆಲ್‌, ಶಾಲೆಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಗಂಜಿ ಕೇಂದ್ರ ತೆರೆದು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಆನಂದಪ್ಪ ನಾಯಕ ತಿಳಿಸಿದರು.
ಬೆಂಕಿ ಆಕಸ್ಮಿಕದಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಒದಗಿಸಲು ಪುರಸಭೆ ಉಪಾಧ್ಯಕ್ಷೆ ಬಲ್ಲಹುಣ್ಸಿ ಹುಲಿಗೆಮ್ಮ ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.