ADVERTISEMENT

ಮತಯಂತ್ರ: 2ನೇ ಹಂತದ ತಪಾಸಣೆಗೆ ಸಿದ್ಧತೆ

ಇಂದಿನಿಂದ ಈಜುಕೊಳ ಆರಂಭ, ಮಲ್ಟಿಜಿಮ್‌, ಶಟಲ್‌ ಬ್ಯಾಡ್ಮಿಂಟನ್‌ ಇನ್ನಷ್ಟು ದಿನ ಅವಕಾಶವಿಲ್ಲ

ಕೆ.ನರಸಿಂಹ ಮೂರ್ತಿ
Published 17 ಮಾರ್ಚ್ 2018, 6:14 IST
Last Updated 17 ಮಾರ್ಚ್ 2018, 6:14 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬಳ್ಳಾರಿ: ಬರಲಿರುವ ವಿಧಾನಸಭೆ ಚುನಾವಣೆಗೆ ಬಳಕೆಯಾಗಲಿರುವ ಮತಯಂತ್ರಗಳ ತಪಾಸಣೆಯ ಮೊದಲ ಹಂತದ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ಎರಡನೇ ಹಂತದಲ್ಲಿ ಹೊಸ ಮತಯಂತ್ರಗಳ ತಪಾಸಣೆ ಕಾರ್ಯ ಶುರುವಾಗಲಿದೆ.

ಪರಿಶೀಲನೆ ಸಲುವಾಗಿ ಜಿಲ್ಲಾ ಕ್ರೀಡಾ ಸಂಕೀರ್ಣವನ್ನು ಫೆ. 19ರಿಂದ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಶುಕ್ರವಾರದಿಂದ ಈಜು ಕೊಳದ ಬಳಕೆಗೆ ಮಾತ್ರ ಅವಕಾಶ ನೀಡಿದೆ. ಅಲ್ಲಿಗೆ ಮುಖ್ಯಗೇಟ್‌ ಮೂಲಕ ಬರುವಂತಿಲ್ಲ. ಸಂಕೀರ್ಣದ ಹೊರವಲಯದ ರಸ್ತೆಗೆ ಹೊಂದಿಕೊಂಡಿರುವ ಕೊಳದ ಮೂಲೆಯ ಮತ್ತೊಂದು ಬಾಗಿಲಿಂದ ಬರಲು ಅನುವು ಮಾಡಲಾಗಿದೆ.

ಆದರೆ ಯಂತ್ರಗಳ ಪರಿಶೀಲನೆ ಕಾರ್ಯ ಮುಂದುವರಿಯಲಿರುವುದರಿಂದ, ಮಲ್ಟಿ ಜಿಮ್‌ ಮತ್ತು ಶಟಲ್‌ ಬ್ಯಾಡ್ಮಿಂಟನ್‌ ಬಳಸಲು ಅನುಮತಿ ನೀಡಿಲ್ಲ. ಈ ಮುನ್ನ, ಮಾರ್ಚ್ 10ರಿಂದ ಜಿಮ್‌ ಬಳಸಬಹುದು ಎಂದು ಬಳಕೆದಾರರಿಗೆ ಮಾಹಿತಿ ನೀಡಲಾಗಿತ್ತು.

ADVERTISEMENT

800 ಮತಯಂತ್ರಗಳನ್ನು ತರಲು ಜಿಲ್ಲೆಯ ಸಿಬ್ಬಂದಿ ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಅವರು ಬಂದ ಬಳಿಕ ಅವುಗಳ ಮೊದಲ ಹಂತದ ತಪಾಸಣೆ ಕಾರ್ಯ ಆರಂಭವಾಗಲಿದೆ. ಹೀಗಾಗಿ ಮಾರ್ಚ್‌ ತಿಂಗಳಿಡೀ ಕ್ರೀಡಾ ಸಂಕೀರ್ಣದ ಎಲ್ಲ ವಿಭಾಗಗಳು ಬಳಕೆದಾರರಿಗೆ ದೊರಕುವ ಸಾಧ್ಯತೆ ಕಡಿಮೆ.

ಹತ್ತು ಎಂಜಿನಿಯರ್‌ಗಳು: ‘ಮೊದಲ ಹಂತದ ತಪಾಸಣೆ ಕಾರ್ಯದಲ್ಲಿ ಬಿ.ಇ.ಎಲ್‌ ಕಂಪೆನಿಯ ಹತ್ತು ಎಂಜಿನಿಯರುಗಳು ಕಾರ್ಯನಿರ್ವಹಿಸಿದ್ದು, ಎಂಟು ಮಂದಿ ಶುಕ್ರವಾರ ಬೆಂಗಳೂರಿಗೆ ತೆರಳಿದರು. ಇಬ್ಬರು ಎಂಜಿನಿಯರುಗಳನ್ನಷ್ಟೇ ಇಲ್ಲಿ ಇರಿಸಿಕೊಳ್ಳಲಾಗಿದೆ. ಮತಯಂತ್ರಗಳು ಬಂದ ಬಳಿಕ ಮತ್ತೆ ಎಂಜಿನಿಯರುಗಳನ್ನು ಕರೆಸಲಾಗುವುದು’ ಎಂದು ತಪಾಸಣೆ ನೋಡಲ್‌ ಅಧಿಕಾರಿಯಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಜೆ.ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಜಾದಿನಗಳಲ್ಲೂ ಬಿಡುವು ಪಡೆಯದೆ ಯಂತ್ರಗಳ ಪರಿಶೀಲನೆ ಕಾರ್ಯ ಕಟ್ಟುನಿಟ್ಟಾಗಿ ನಡೆದಿದೆ. ಎಲ್ಲ ರೀತಿಯಲ್ಲೂ ಪರಿಶೀಲಿಸಲಾಗಿದೆ. ಈಗ ಎಲ್ಲ ಯಂತ್ರಗಳನ್ನೂ ಭದ್ರತಾ ಕೊಠಡಿಗೆ ಸ್ಥಳಾಂತರಿಸಬೇಕಾಗಿದೆ. ಅದಕ್ಕಾಗಿ ಕೆಲವು ದಿನಗಳು ಬೇಕಾಗಬಹುದು. ನಂತರ ಹೊಸ ಯಂತ್ರಗಳ ಪರಿಶೀಲನೆ ಆರಂಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಎಡಿಸಿ, ತಹಶೀಲ್ದಾರ್‌ ವರ್ಗಾವಣೆ
ಬಳ್ಳಾರಿ:
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಜೆ.ಸೋಮಶೇಖರ ಅವರನ್ನು ಧಾರವಾಡಕ್ಕೆ ವರ್ಗಾಯಿಸಲಾಗಿದೆ.

ತಹಶೀಲ್ದಾರ್‌ಗಳಾದ ಸಿರುಗುಪ್ಪದ ಎಂ.ಸುನೀತಾ, ಹಗರಿಬೊಮ್ಮನಹಳ್ಳಿಯ ಕೆ.ವಿಜಯಕುಮಾರ್‌, ರಾಘವೇಂದ್ರರಾವ್‌, ಕುರುಗೋಡಿನ ಎಂ.ಬಸವರಾಜ್ ಅವರನ್ನೂ ವರ್ಗಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

*
ಈಜುಕೊಳವನ್ನು ಆರಂಭಿಸಿರುವುದು ಸಂತಸ ಮೂಡಿಸಿದೆ. ಅದೇ ರೀತಿ ಮಲ್ಟಿಜಿಮ್‌ ಮತ್ತು ಶಟಲ್‌ ಬ್ಯಾಡ್ಮಿಂಟನ್‌ ಬಳಕೆಗೂ ಬೇಗ ಅವಕಾಶ ನೀಡಬೇಕು.
–ರಮಣ, ರಾಜೇಶ್‌, ವೆಂಕಿ, ವೀರೇಶ್‌, ಕ್ರೀಡಾ ಪ್ರೇಮಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.