ADVERTISEMENT

ಮಳೆಯಿಂದ ಕುಸಿದು ಮನೆಗಳು, ತುಂಬಿ ಹರಿದ ಹಳ್ಳ ಕೊಳ್ಳಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 5:48 IST
Last Updated 15 ಅಕ್ಟೋಬರ್ 2017, 5:48 IST

ಕುರುಗೋಡು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳು ಕುಸಿದಿವೆ. ಬೆಳೆಗಳಿಗೆ ಹಾನಿ ಉಂಟಾಗಿದೆ. ಹಳ್ಳಗಳು ತುಂಬಿ ಹರಿದಿವೆ.

ಕುರುಗೋಡು ಸಮೀಪದ ಸೋಮಲಾಪುರದ ಮುಕ್ಕಣ್ಣ, ಬಸಾಪುರ ದೊಡ್ಡಪ್ಪ, ಅಂಗಡಿ ದುರುಗಪ್ಪ, ಅಂಗಡಿ ಶಿವರಾಮಪ್ಪ, ಎಂ.ಮಾರಿಮಾರೆಮ್ಮ ಹಾಗೂ ಜಿ.ಮಲ್ಲಪ್ಪ ಎಂಬುವರ ಮನೆ ಕುಸಿದಿವೆ. ಸಿದ್ದಮ್ಮನಹಳ್ಳಿ ಗ್ರಾಮದ ಬಸವೇಶ್ವರ ನಗರದಲ್ಲಿ ಹುಲಿಗೆಮ್ಮ , ಬಾದನಹಟ್ಟಿಯ ದಿನ್ನಿ ಹನುಮಂತಮ್ಮ ಹಾಗೂ ಕೊಮಾರೆಪ್ಪ ಇವರ ಮನೆಗಳು ಮಳೆ ಗಾಳಿಗೆ ಬಿದ್ದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. 54 ಎಂ.ಎಂ. ಮಳೆಯಾಗಿದೆ ಎಂದು ವರದಿಯಾಗಿದೆ.

ತುಂಬಿ ಹರಿದ ಹಳ್ಳಗಳು: ಮದಿರೆ ಗ್ರಾಮದ ಹಿರೇಹಳ್ಳ ನೀರು ತುಂಬಿ ಸೇತುವೆಯ ಮೇಲೆ ಹರಿದ ಪರಿಣಾಮ ಮದಿರೆ ಮತ್ತು ಕೋಳೂರು ನಡುವೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮದಿರೆ ಕ್ರಾಸ್ ನಿಂದ ಕೋಳೂರು ಕ್ರಾಸ್ ಮಾರ್ಗವಾಗಿ ಬಳ್ಳಾರಿಗೆ ಹೋಗಬೇಕಾಯಿತು.

ADVERTISEMENT

ಸಿದ್ದಮ್ಮನಹಳ್ಳಿ, ಯರಂಗಳಿಗಿ, ಬಾದನಹಟ್ಟಿ ಮತ್ತು ಗೆಣಿಕೆಹಾಳು ಗ್ರಾಮಗಳ ಬಳಿ ಹರಿಯುವ ಹಳ್ಳಗಳು ತುಂಬಿ ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿತ್ತು. ಮಧ್ಯಾಹ್ನದ ನಂತರ ನೀರಿನ ಹರಿವು ಕಡಿಮೆಯಾಗಿ ವಾಹನಗಳು ಓಡಾಡಿದವು. ತಗ್ಗು ಪ್ರದೇಶ ಮತ್ತು ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು ದೃಶ್ಯ ಕಂಡು ಬಂತು.

ಬೆಳೆ ಹಾನಿ: ಬಾದನಹಟ್ಟಿ ಗ್ರಾಮ ಹಳ್ಳದ ಪಕ್ಕದಲ್ಲಿರುವ ಭತ್ತ, ಮೆಕ್ಕೆಜೋಳ ಮತ್ತು ಹತ್ತಿ ಬೆಳೆದ ಹೊಲಗಳಿಗೆ ನೀರು ನುಗ್ಗಿ ಬೆಳೆಗೆ ಹಾನಿ ಆಗಿದೆ. ಅಲ್ಲದೇ ಎಮ್ಮಿಗನೂರು ಗ್ರಾಮದಲ್ಲಿ ಮಳೆಯಿಂದಾಗಿ ಬೆಳೆದು ನಿಂತಿದ್ದ ಮೆಕ್ಕೆಜೋಳದ ಬೆಳೆ ನೆಲಕ್ಕೆ ಉರಿಳಿದೆ. ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.

ಲಾಭ–ನಷ್ಟ: ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿದ್ದು, ಭತ್ತದ ಬೆಳೆಗಾರರು ಹರ್ಷಚಿತ್ತರಾಗಿದ್ದಾರೆ. ಮೆಣಸಿನಕಾಯಿ, ಹತ್ತಿ, ಬೆಳೆಗಾರರ ಮಳೆ ಚಿಂತೆಗೀಡು ಮಾಡಿದೆ. ಯಾಕೆಂದರೆ ಕಟಾವಿಗೆ ಬಂದಿರುವ ಸಜ್ಜೆ, ನವಣೆ ಬೆಳೆ ಮಳೆಗೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಭಯ ರೈತರನ್ನು ಕಾಡತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.