ADVERTISEMENT

ಮಳೆ ಕೊರತೆ: ತಿನ್ನಲೂ ಸಿಗದ ಹಸಿ ಕಡಲೆ

ಹೆಚ್ಚುತ್ತಿರುವ ಬೇಡಿಕೆ, ಸಿಗದ ಉತ್ತಮ ಗುಣಮಟ್ಟದ ಕಾಳಿನ ಗಿಡ, ಇಳುವರಿಯೂ ಕುಗ್ಗುವ ಭೀತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:34 IST
Last Updated 16 ಜನವರಿ 2017, 8:34 IST
ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದಲ್ಲಿ ತಳ್ಳು ಗಾಡಿಯಲ್ಲಿಟ್ಟುಕೊಂಡು ಹಸಿ ಕಡಲೆಯನ್ನು ಮಾರಾಟ ಮಾಡುತ್ತಿರುವುದು.
ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದಲ್ಲಿ ತಳ್ಳು ಗಾಡಿಯಲ್ಲಿಟ್ಟುಕೊಂಡು ಹಸಿ ಕಡಲೆಯನ್ನು ಮಾರಾಟ ಮಾಡುತ್ತಿರುವುದು.   

ಕೂಡ್ಲಿಗಿ: ಹಿಂಗಾರು ಮಳೆಯೂ ಕೈಕೊಟ್ಟ ಕಾರಣ ತಾಲ್ಲೂಕಿನಲ್ಲಿ ಈ ಬಾರಿ ಕಡಲೆ ಬಿತ್ತನೆ ಕುಗ್ಗಿದೆ. ಹೀಗಾಗಿ ಈ ಭಾಗದಲ್ಲಿ ಹಸಿ ಕಡಲೆ ತಿನ್ನಲೂ ಸಿಗುತ್ತಿಲ್ಲ.
ಹಸಿ ಕಡಲೆ ಗಿಡಕ್ಕೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷ ಜನವರಿ ತಿಂಗಳು ಆರಂಭವಾಗುತ್ತಿದ್ದಂತೆ ಕೂಡ್ಲಿಗಿ ಮತ್ತು ಕೊಟ್ಟೂರು ಪಟ್ಟಣಗಳ ಬಸ್ ನಿಲ್ದಾಣ, ಸಂತೆ ಸೇರಿ ಜನ ಸಂದಣಿ ಇರುವ ಪ್ರದೇಶಗಳಲ್ಲಿ ಹಸಿ ಕಡಲೆ ಗಿಡದ ಮಾರಾಟ  ಭರ್ಜರಿಯಾಗಿ ನಡೆಯು­ತ್ತಿತ್ತು.

ಸಣ್ಣ ಪುಟ್ಟ ವ್ಯಾಪಾರಸ್ಥರು ಹಸಿ ಕಡಲೆ ಮಾರಾಟ ಮಾಡುತ್ತಾ ಜೀವನ ರೂಪಿಸಿಕೊಳ್ಳುತ್ತಿದ್ದರು. ಆದರೆ ಈಗ ಬೆಳೆ ಇಲ್ಲದೆ ಮಾರಾಟಗಾರರಿಗೆ ಹಸಿ ಕಡಲೆ ಗಿಡವೂ ಸಿಗುತ್ತಿಲ್ಲ. ಸಿಕ್ಕರೂ ಸದೃಢ ಕಾಯಿ ಕಡಿಮೆ ಇರುವ ಕಾರಣ ಮಾರಾಟವೂ ಸರಿಯಾಗಿ ನಡೆಯುತ್ತಿಲ್ಲ.

ಈ ಬಾರಿ ಈರುಳ್ಳಿ ಬೆಲೆ ತೀವ್ರ ಕುಸಿತದಿಂದ ಕಂಗೆಟ್ಟಿದ್ದ ರೈತರು, ಈರುಳ್ಳಿ ಬಿತ್ತನೆ ಮಾಡಿದ್ದ ಜಮೀನನ್ನು ಹಸನು­ಗೊಳಿಸಿ, ಹಿಂಗಾರು ಹಂಗಾಮಿನ­ಲ್ಲಾದರೂ ಒಂದಷ್ಟು ಆದಾಯ ಬರಲಿ ಎಂದು ಕಡಲೆ ಬಿತ್ತನೆ ಮಾಡಿದ್ದರು. ಆದರೆ ಮಳೆ ಸಂಪೂರ್ಣ ಕೈಕೊಟ್ಟಿದ್ದ­ರಿಂದ ಭೂಮಿಯಲ್ಲಿ ತೇವಾಂಶ ಇಲ್ಲವಾ­ಯಿತು. ಬಿತ್ತನೆ ಮಾಡಿದ ಕಡಲೆಯಲ್ಲ ಒಣಗಿತು.

ಆದರೂ ತಾಲ್ಲೂಕಿನ ಕೆಲವು ರೈತರು ತಮ್ಮ ಜಮೀನಿನ ಕೊಳವೆ ಬಾವಿ ನಂಬಿ ಕಡಲೆ ಬಿತ್ತನೆ ಮಾಡಿದ್ದರು. ಆದರೆ ಕೊಳವೆ ಬಾವಿಗಳಲ್ಲೂ ಅಂತರ್ಜಲ ಕಡಿ­ಮೆಯಾದ ಕಾರಣ ಇಳುವರಿ ಕಡಿಮೆ­ಯಾಗುವ ಅಪಾಯ ಎದುರಾಗಿದೆ.

ಎರೆ ಜಮೀನಿನಲ್ಲೇ ಬೆಳೆ ಇಲ್ಲ ತಾಲ್ಲೂಕಿನ ಕೊಟ್ಟೂರು ಹಾಗೂ ಹೊಸಹಳ್ಳಿ ಹೋಬಳಿಗಳಲ್ಲಿ ಪ್ರತಿ ವರ್ಷ 4,500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೇವಲ 1080 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಕೇವಲ 30 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಮಾತ್ರ  ಬೆಳೆ ಉಳಿದುಕೊಂಡಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ವಾಮದೇವ ಹೇಳುತ್ತಾರೆ.

ಕೊಟ್ಟೂರು ಹೋಬಳಿಯ ಕೊಟ್ಟೂರು, ದೂಪದಹಳ್ಳಿ, ಕೆ. ಅಯ್ಯನಹಳ್ಳಿ, ತೂಲಹಳ್ಳಿ,  ಉಜ್ಜನಿ ಹಾಗೂ ಹೊಸಹಳ್ಳಿ ಹೋಬಳಿಯ ಆಲೂರು ಭಾಗದ ಎರೆ ಭೂಮಿಯಲ್ಲಿ ಹೆಚ್ಚಾಗಿ ಕಡಲೆ ಬೆಳೆಯುತ್ತಿದ್ದರು. ಈ ಭಾಗದ ಜನರು ಪ್ರತಿವರ್ಷ ಹಸಿ ಕಡಲೆಯನ್ನು ಬಯಸಿದಷ್ಟು ತಿನ್ನುತ್ತಿ­ದ್ದರು. ಆದರೆ ಈ ಬಾರಿ ಮಳೆ ಅಭಾವ­ದಿಂದ ಕಡಲೆ ಬೆಳೆಗೆ ಪ್ರಸಿದ್ಧಿಯಾದ ತಾಲ್ಲೂ­ಕಿನ ಹಳ್ಳಿಗಳಲ್ಲೇ ಬೆಳೆ ಇಲ್ಲ­ದಂತಾ­ಗಿದೆ. 

ಹಸಿ ಕಡಲೆ ತಿನ್ನಲು ಬಯ­ಸುವವರಿಗೆ ಕಡಲೆ ಗಿಡ ಸಿಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನ­ಗಳಲ್ಲಿ ಕಡಲೆಕಾಳು ಧಾರಣೆ ಗಗನ­ಕ್ಕೇರು­ವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

ಬೆಳೆ ಇಲ್ಲದಿರುವಾಗ ಬೇಡಿಕೆ
‘ಜಮೀನಿನಲ್ಲಿ ಬೆಳೆ ಇಲ್ಲದಿರುವಾಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹಸಿ ಕಡಲೆ ಗಿಡ ಮಾರಾಟ ಮಾಡಲು ಸ್ಥಳೀಯವಾಗಿ ಕಡಲೆ ಗಿಡ ಸಿಗುತ್ತಿಲ್ಲ. ಮಾರಾಟ ಮಾಡುವವರು ಹೊಸಪೇಟೆ ಮಾಗಣಿ ಪ್ರದೇಶದಲ್ಲಿ ಖರೀದಿ ಮಾಡಿ ತರಬೇಕು. ಅಲ್ಲಿಂದ ತಂದು  ಪ್ರತಿ ಕೆಜಿಗೆ ₹ 40 ಕೊಟ್ಟು ತಂದು  ಮಾರಾಟ ಮಾಡಿದರೂ ಸಿಗುವ ಲಾಭ ಅಷ್ಟಕಷ್ಟೇ. ಆದರೂ ವ್ಯಾಪರ ನಡೆಸು­ತ್ತಿದ್ದೇನೆ’ ಎಂದು  ಕಡೆಲೆ ಮಾರಾಟ ಮಾಡು­ತ್ತಿದ್ದ  ರಾಘವೇಂದ್ರ ಹೇಳಿದರು.
-ಎ.ಎಂ. ಸೋಮಶೇಖರಯ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.