ADVERTISEMENT

ಮೇವು ಬ್ಯಾಂಕ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:07 IST
Last Updated 16 ಮೇ 2017, 7:07 IST

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಸೋಮವಾರ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ರೈತರಿಗೆ ಮೇವು ವಿತರಿಸಿ, ಮೇವು ಬ್ಯಾಂಕ್ ಉದ್ಘಾಟಿಸಿದರು.

‘ಕಳೆದ ವರ್ಷ ಮುಂಗಾರು, ಹಿಂಗಾರು ವೈಫಲ್ಯದಿಂದ ತಾಲ್ಲೂಕು ಬರಪೀಡಿತವಾಗಿದ್ದು, ಪಶು ಸಂಗೋಪನೆ ಇಲಾಖೆಯ ಸಮೀಕ್ಷೆಯಂತೆ ಇಟ್ಟಿಗಿ ಹೋಬಳಿಯಲ್ಲಿ ಮೇವಿನ ಕೊರತೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಇಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗಿದೆ’ ಎಂದು ಶಾಸಕ ಪರಮೇಶ್ವರನಾಯ್ಕ ತಿಳಿಸಿದರು.

‘ನಿಯಮಾನುಸಾರ ಪ್ರತಿ ಜಾನುವಾರಿಗೆ ನಿರ್ದಿಷ್ಟ ತೂಕದ ಮೇವನ್ನು ವಿತರಿಸಲಾಗುತ್ತಿದೆ. ಮೇವಿನ ಕೊರತೆ ಇರುವ ರೈತರು ಮಾತ್ರ ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಮಾತನಾಡಿ, ‘ಪ್ರತಿ ಜಾನುವಾರಿಗೆ ದಿನಕ್ಕೆ 5 ಕೆಜಿಯಂತೆ ಮೇವು ವಿತರಿಸಲಾಗುತ್ತದೆ. ರೈತರು ಪ್ರತಿ ಕೆಜಿ ಮೇವಿಗೆ ₹2 ಪಾವತಿಸಿ ಕೊಂಡೊಯ್ಯಬಹುದು. ತಾಲ್ಲೂಕಿನಲ್ಲಿ ಅಗತ್ಯ ಪ್ರಮಾಣದ ಮೇವು ಲಭ್ಯವಿದ್ದು, ಇಟ್ಟಿಗಿ ಹೋಬಳಿಯಲ್ಲಿ ಕೊರತೆ ಇರುವ ಕಾರಣ ಮೇವು ಬ್ಯಾಂಕ್ ತೆರೆಯಲಾಗಿದೆ.  ಸಮರ್ಪಕ ರೀತಿಯಲ್ಲಿ ಮೇವು ವಿತರಣೆ ಮಾಡಲು ಜನರ ಸಹಕಾರ ಮುಖ್ಯ’ ಎಂದರು.

ತಾ.ಪಂ ಅಧ್ಯಕ್ಷೆ ಶಾರದ ಬಳಿಗಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಕುಂಚೂರು ಶೀಲಾ ಕೊಟ್ರೇಶ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿದಾನಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.