ADVERTISEMENT

ರಥ ನಿರ್ಮಾಣಕ್ಕೆ ಸರ್ಕಾರದ ನೆರವು

ಕೊಟ್ಟೂರಿನಲ್ಲಿ ನಡೆದ ಪ್ರಕರಣ; ಸಚಿವರಾದ ಸಂತೋಷ ಲಾಡ್, ರುದ್ರಪ್ಪ ಲಮಾಣಿ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:39 IST
Last Updated 28 ಫೆಬ್ರುವರಿ 2017, 10:39 IST

ಕೊಟ್ಟೂರು: ಕೊಟ್ಟೂರೇಶ್ವರ ಸ್ವಾಮಿಯ ನೂತನ ರಥ ನಿರ್ಮಾಣಕ್ಕೆ ಸರ್ಕಾರ ದಿಂದ ಅನುದಾನ ದೊರಕಿಸಿಕೊಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಎಸ್. ಸಂತೋಷ ಲಾಡ್ ತಿಳಿಸಿದರು.

ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ರಥ ನಿರ್ಮಾಣ ಚಿಂತನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿ ಗಳು ಹಾಗೂ ಮುಜರಾಯಿ ಇಲಾಖೆಯ ಸಚಿವರೊಂದಿಗೆ ಸಮಾಲೋಚಿಸಿ ಅನುದಾನ ಮಂಜೂರು ಮಾಡುವುದ ಲ್ಲದೇ ವೈಯಕ್ತಿವಾಗಿ ನೆರವು ನೀಡಲು ಮುಂದಾಗುವುದಾಗಿ ತಿಳಿಸಿದರು.

ಬಹುವರ್ಷಗಳ ಬೇಡಿಕೆಯಾದ ಕೊಟ್ಟೂರು ತಾಲ್ಲೂಕು ಕೇಂದ್ರವು ಈಗಾಗಲೇ ಘೋಷಿತವಾಗಿರುವ 43 ತಾಲ್ಲೂಕಗಳ ಪಟ್ಟಿಯಲ್ಲಿದ್ದು, ಮುಂಬರುವ ಬಜೆಟ್‌ನಲ್ಲಿ ತಾಲ್ಲೂಕು ಕೇಂದ್ರ ಎಂದು ಘೋಷಿಸಲು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಬೇಟಿಮಾಡಿ ಒತ್ತಡ ಏರಲು ಶೀಘ್ರದಲ್ಲಿಯೇ ಕೊಟ್ಟೂರು ಕಟ್ಟೆಮನಿ ದೈವ ಹಾಗೂ ಮುಖಂಡರನ್ನೊಳ ಗೊಂಡ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದರು.

ಶಾಸಕ ಎಸ್ ಭೀಮಾನಾಯ್ಕ ಮಾತನಾಡಿ, ನೂತನ ರಥ ನಿರ್ಮಾಣ ಹಾಗೂ ತಾಲ್ಲೂಕು ರಚನೆ ಅತಿ ಅವಶ್ಯಕವಾಗಿದ್ದು, ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕಲು ನಿಮ್ಮೊಂದಿಗೆ ನಾನು ಸದಾ ಕೈಜೋಡಿಸುತ್ತೇನೆ ಎಂದು ಅವರು ಹೇಳಿದರು.

ಕೊಟ್ಟೂರು ಕಟ್ಟೆಮನಿ ದೈವದ ಅಧ್ಯಕ್ಷರಾದ ಎಂ.ಎಂ.ಜೆ.ಸ್ವರೂಪಾನಂದ ಹಾಗೂ ಇತರೆ ಮುಖಂಡರು ರಥ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಧನ ಮಂಜೂರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯರು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಲ್ಮಠದ ಶಂಕರ್ ಸ್ವಾಮೀಜಿ, ಕ್ರಿಯಾಮೂರ್ತಿ ಕೊಟ್ಟೂರುಸ್ವಾಮೀಜಿ, ನುಗ್ಗಿಹಳ್ಳಿ ಮಠದ ಸ್ವಾಮೀಜಿ, ಕಲಾಕೇಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ್, ಆರ್.ಎಂ. ಗುರುಸ್ವಾಮಿ, ಸಕ್ರಿಗೌಡ್ರು, ಪಿ.ಎಚ್. ದೊಡ್ಡರಾಮಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.

ಶಾಂತಿ ಹೋಮದಲ್ಲಿ ಭಾಗವಹಿಸಿದ ಸಚಿವ ಲಮಾಣಿ

ಕೊಟ್ಟೂರು: ಕೊಟ್ಟೂರೇಶ್ವರ ಸ್ವಾಮಿಯ ನೂತನ ರಥ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಮುಜರಾಯಿ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ಸೋಮವಾರ ಇಲ್ಲಿ ಹೇಳಿದರು.

ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ಶಾಂತಿ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಾಸಕ ಭೀಮಾನಾಯ್ಕ ನೇತೃತ್ವದಲ್ಲಿ ಕಟ್ಟೆಮನಿ ದೈವಸ್ಥರು ಹಾಗೂ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕೊಂಡೊಯ್ದು ಸರ್ಕಾರದ ಅನುದಾನ ಕೊಡಿಸಲು  ಪ್ರಯತ್ನಿಸುವುದಾಗಿ ತಿಳಿಸಿದರು.

ಬೆಳಗಿನ ಜಾವದಿಂದಲೇ ನಡೆದ ಶಾಂತಿ ಹೋಮದಲ್ಲಿ ಅನೇಕ ಹರ ಗುರು ಚರ ಮೂರ್ತಿಗಳು ಹಾಗೂ ಅನೇಕ ಭಕ್ತವೃಂದ ಪಾಲ್ಗೊಂಡಿದ್ದರು. ಉಜ್ಜಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯರು ಹೋಮಕ್ಕೆ ಪೂರ್ಣಾಹುತಿ ಕೊಡುವುದರ ಮೂಲಕ ಭಕ್ತರಲ್ಲಿ ಅಡಗಿದ್ದ ಭಯ, ಆತಂಕಗಳನ್ನು ದೂರ ಮಾಡಿ ಸರ್ವದೋಷ ನಿವಾರಣೆಯಾಗಲೆಂದು ಹಾರೈಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.