ADVERTISEMENT

ವಿದ್ಯಾರ್ಥಿಗಳಿಗಾಗಿ ಪದೋನ್ನತಿ ನಿರಾಕರಿಸಿದ ಶಿಕ್ಷಕ

ಕೆ.ಸೋಮಶೇಖರ
Published 5 ಸೆಪ್ಟೆಂಬರ್ 2017, 6:18 IST
Last Updated 5 ಸೆಪ್ಟೆಂಬರ್ 2017, 6:18 IST
ಹೂವಿನಹಡಗಲಿ ತಾಲ್ಲೂಕು ನಂದಿಗಾವಿ ಶಾಲೆಯಲ್ಲಿ ಪಾಠ ಹೇಳುತ್ತಿರುವ ಶಿಕ್ಷಕ ಪುಟ್ಟಪ್ಪ ಕೋಡಬಾಳ
ಹೂವಿನಹಡಗಲಿ ತಾಲ್ಲೂಕು ನಂದಿಗಾವಿ ಶಾಲೆಯಲ್ಲಿ ಪಾಠ ಹೇಳುತ್ತಿರುವ ಶಿಕ್ಷಕ ಪುಟ್ಟಪ್ಪ ಕೋಡಬಾಳ   

ಹೂವಿನಹಡಗಲಿ: ಕರ್ತವ್ಯ ಪ್ರಜ್ಞೆ ಮತ್ತು ಶುದ್ಧ ಚಾರಿತ್ರ್ಯಕ್ಕೆ ಹೆಸರಾಗಿರುವ ತಾಲ್ಲೂಕಿನ ನಂದಿಗಾವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಪುಟ್ಟಪ್ಪ ಬಸವಣ್ಯೆಪ್ಪ ಕೋಡಬಾಳ ಅವರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿರುವ ಇವರು, ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿದ್ದಾರೆ. ಬಡ ವಿದ್ಯಾರ್ಥಿಗಳು ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಕಾರಣರಾಗಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಕೋಡಬಾಳ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿಕೊಂಡಿದೆ.

ಹಾವೇರಿ ತಾಲ್ಲೂಕು ಶಿರಮಾಪುರ ಗ್ರಾಮದ ಪಿ.ಬಿ.ಕೋಡಬಾಳ ಅವರು 1989ರಲ್ಲಿ ಶಿಕ್ಷಕರಾಗಿ ನೇಮಕವಾದರು. ಆಂಧ್ರ ಗಡಿಯ ಬಳ್ಳಾರಿ ತಾಲ್ಲೂಕು ಗೋಟೂರು ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದರು. ಕಳೆದ 27 ವರ್ಷಗಳಿಂದ ಹೂವಿನಹಡಗಲಿ ತಾಲ್ಲೂಕಿನ ತುಂಗಭದ್ರಾ ನದಿ ತೀರದ ಹಿರೇಬನ್ನಿಮಟ್ಟಿ ಮತ್ತು ನಂದಿಗಾವಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುತ್ತಿದ್ದಾರೆ. ಪ್ರಶಸ್ತಿ, ಪುರಸ್ಕಾರಗಳನ್ನು ಬೆನ್ನು ಹತ್ತಿ ಹೋಗದ ಇವರು, ವಿದ್ಯಾರ್ಥಿಗಳು ಮತ್ತು ಸಮುದಾಯ ನೀಡುವ ಗೌರವವೇ ದೊಡ್ಡ ಪುರಸ್ಕಾರ ಎಂದು ನಂಬಿದ್ದಾರೆ.

ADVERTISEMENT

ನವೋದಯ, ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಗಾಂಧಿ ಗ್ರಾಮೀಣ ಗುರುಕುಲ ಶಾಲೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ರೈತರು ಹಾಗೂ ಕಾರ್ಮಿಕರ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಉಚಿತವಾಗಿ ತರಬೇತಿ ನೀಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯ ಮಾದರಿ ಪಠ್ಯ ಕ್ರಮ ಜತೆಗೆ ತಮ್ಮ ಅನುಭವದ ಸಾಮಾನ್ಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಪ್ರತಿವರ್ಷವೂ ಇಲ್ಲಿ ತರಬೇತಿ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಇವರ ಅಗ್ಗಳಿಕೆ.

ಇವರಿಗೆ ನಾಲ್ಕು ಬಾರಿ ಮುಂಬಡ್ತಿಯ ಆದೇಶ ಬಂದಿದ್ದರೂ ನಯವಾಗಿಯೇ ತಿರಸ್ಕರಿಸಿ ನಂದಿಗಾವಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲೇ ಉಳಿದಿದ್ದಾರೆ. ತುಂಗಭದ್ರಾ ನದಿ ತೀರದ ಮೂಲೆಕಟ್ಟಿನ ಹಳ್ಳಿಯ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಪದೋನ್ನತಿ ಬೇಡ ಎಂದಿರುವ ಶಿಕ್ಷಕ ಕೋಡಬಾಳ ಅವರು ಮಾದರಿ ಶಿಕ್ಷಕ ಎನಿಸಿದ್ದಾರೆ.

‘ಬಡ್ತಿ ಹೊಂದಿ ಹಿರಿಯ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೋಗಬಹುದಿತ್ತು. ಈ ಹಳ್ಳಿಯ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ನನ್ನನ್ನು ನೆಚ್ಚಿಕೊಂಡಿದ್ದಾರೆ. ಮುಂದಿನ ವರ್ಷ ನಿವೃತ್ತಿ ಹೊಂದಲಿರುವ ನನಗೆ ಬಡ್ತಿ ಬೇಡ ಎಂದಿದ್ದೇನೆ. ಶಿಕ್ಷಣ ಮೊಟಕುಗೊಳಿಸುತ್ತಿದ್ದ ವಿದ್ಯಾರ್ಥಿಗಳು ಉತ್ತಮ ದರ್ಜೆಯ ವಸತಿ ಶಾಲೆಗಳಿಗೆ ಆಯ್ಕೆಯಾಗಿ ಶಿಕ್ಷಣ ಮುಂದುವರಿಸಿದರೆ ನನ್ನ ಶ್ರಮ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಕೋಡಬಾಳ ಅವರು.

‘ಕೋಡಬಾಳರಂಥ ಶಿಕ್ಷಕರು ನಮ್ಮೂರಲ್ಲಿ ಇರೋದೆ ನಮಗೆ ಹೆಮ್ಮೆ ಎನಿಸುತ್ತದೆ. ಅವರ ಕೈಯಲ್ಲಿ ಕಲಿತ ಹುಡುಗ್ರು ಡಿವೈಎಸ್ಪಿ, ತಹಶೀಲ್ದಾರ್‌, ಡಾಕ್ಟರ್, ಸಬ್‌ ಇನ್‌ಸ್ಪೆಕ್ಟರ್‌ ಆಗ್ಯಾರ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾವಧಿ ನಂತರವೂ ವಿಶೇಷ ತರಗತಿ ನಡೆಸುತ್ತಾರೆ. ಇಂಥ ಶಿಕ್ಷಕರು ಇರುವುದು ತೀರಾ ವಿರಳ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಆನಗೌಡ್ರ ನಿಂಗನಗೌಡ ಅಭಿಮಾನದಿಂದ ಹೇಳಿದರು.

* * 

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಶಿಕ್ಷಣ ಇಲಾಖೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಮ್ಮ ಮಾರ್ಗದರ್ಶನ ಪಡೆದು ಶೈಕ್ಷಣಿಕ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಅರ್ಪಿಸುತ್ತೇನೆ
ಪುಟ್ಟಪ್ಪ ಕೋಡಬಾಳ
ಶಿಕ್ಷಕ, ನಂದಿಗಾವಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.