ADVERTISEMENT

‘ವಿಮಾ ಕಂಪೆನಿಯಿಂದ ರೈತರಿಗೆ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 8:42 IST
Last Updated 8 ಜುಲೈ 2017, 8:42 IST

ಕೂಡ್ಲಿಗಿ: ರೈತರ ಬಾಳಿಗೆ ಆಶಾಕಿರಣ ವಾಗಬೇಕಿದ್ದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು  ಯುನಿ ವರ್ಸಲ್ ಸೋಂಪೋ ಎಂಬ ವಿಮಾ ಕಂಪೆನಿ ತನ್ನ ಲಾಭಕ್ಕಾಗಿ ಹಾಳು ಮಾಡುತ್ತಿದೆ ಎಂದು ಬಳ್ಳಾರಿ ಸಂಸದ ಬಿ. ಶ್ರೀ ರಾಮುಲು ಆರೋಪಿಸಿದರು. ಜಿಲ್ಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳ ಬಗ್ಗೆ ವಿಮಾ ಕಂಪೆನಿ ಕೇಂದ್ರ ಹಾಗೂ ರಾಜ್ಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ದೂರಿದರು.

ಜಿಲ್ಲೆಯಲ್ಲಿ 27198 ರೈತರು ತಮ್ಮ ಬೆಳೆಗಳಿಗೆ ₹9.72 ಕೋಟಿ, ಹವಾಮಾನ ಆಧರಿತ ವಿಮೆಯಲ್ಲಿ 1027 ರೈತರು ₹71 ಲಕ್ಷ ಪ್ರೀಮಿಯಂ ಹಣ ಕಟ್ಟಿದ್ದಾರೆ. ಕೂಡ್ಲಿಗಿ ತಾಲ್ಲೂಕು ಒಂದರಲ್ಲೇ 8,277 ರೈತರು  ₹1.38 ಲಕ್ಷ ವಿಮೆ ಹಣ ಪಾವತಿ ಮಾಡಿದ್ದಾರೆ. ಆದರೆ ವಿಮಾ ಕಂಪೆನಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ತಾಲ್ಲೂಕಿನ ಯಾವುದೇ ಬೆಳೆ ಹಾನಿಯಾಗಿಲ್ಲ. ಸರಾಸರಿ ಇಳುವರಿಗಿಂತ ಹೆಚ್ಚು ಬೆಳೆ ಬಂದಿದೆ ಎಂದು ತಪ್ಪು ವರದಿ ನೀಡಿದ್ದಾರೆ.

ಇದರಿಂದ ಜಿಲ್ಲೆಯಲ್ಲಿನ 28 ಸಾವಿರ ರೈತರಲ್ಲಿ ಕೇವಲ 6474 ರೈತರು ಮಾತ್ರ ವಿಮೆ ಹಣ ಪಡೆಯಲು ಆರ್ಹರು ಎಂದು ಪರಿಹಣಿಸಲಾಗಿದೆ. ರೈತರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಿದ್ದ ಹಣವನ್ನು ಕಂಪೆನಿ ಲಪಟಾಯಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಚಾರ ಅಸ್ತವ್ಯಸ್ಥ:  ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರೈತರು ಸೇರುತ್ತಿದ್ದಂತೆ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿತು.  ಎಲ್ಲಾ ಪಾದಯಾತ್ರಿಗಳು ರಸ್ತೆಯ ಒಂದು ಬದಿಯಲ್ಲಿ ನಡೆದು ಕೊಂಡು ಹೋಗಲು ಆರಂಭಿಸಿದ ನಂತರ ಸಂಚಾರ ಸುಗಮವಾಯಿತು.

ಉಗ್ರ ಹೋರಾಟ: ವಿಮೆ ಹೆಸರಿನಲ್ಲಿ ರೈತರ ಹಣ ಪಡೆದು ವಂಚಿಸಿರುವ ಯುನಿವರ್ಸಲ್ ಸೋಂಪೋ ಕಂಪೆನಿಯು ರೈತರಿಗೆ ಸೂಕ್ತ ಪರಿಹಾರ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಶಾಸಕ ಬಿ. ನಾಗೇಂದ್ರ ಎಚ್ಚರಿಸಿದರು. ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ವಿಧಾನಸಭಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.