ADVERTISEMENT

ಸಂರಕ್ಷಿತ ಪಕ್ಷಿಧಾಮವಾದ ಅಂಕಸಮುದ್ರ ಕೆರೆ

ದೇಶ–ವಿದೇಶಗಳ 140ಕ್ಕೂ ಅಧಿಕ ಪ್ರಭೇದಗಳ ಪಕ್ಷಿಗಳ ನೆಲೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 9:34 IST
Last Updated 6 ಫೆಬ್ರುವರಿ 2017, 9:34 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಕೆರೆಯಲ್ಲಿ ವಾಸವಾಗಿದ್ದ ಬಣ್ಣದ ಕೊಕ್ಕರೆ (ಸಂಗ್ರಹ ಚಿತ್ರ)
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಕೆರೆಯಲ್ಲಿ ವಾಸವಾಗಿದ್ದ ಬಣ್ಣದ ಕೊಕ್ಕರೆ (ಸಂಗ್ರಹ ಚಿತ್ರ)   

ಹಗರಿಬೊಮ್ಮನಹಳ್ಳಿ: ವನ್ಯಜೀವಿ ಸಲಹಾಮಂಡಳಿ ನೀಡಿದ್ದ ಪ್ರಸ್ತಾವವನ್ನು ಅಂಗೀಕರಿಸಿ ಮೂರು ತಿಂಗಳಲ್ಲಿಯೇ ರಾಜ್ಯ ಸರ್ಕಾರ ಈಗ ಅಧಿಕೃತವಾಗಿ ಅಂಕಸಮುದ್ರ ಕೆರೆ ಪಕ್ಷಿಗಳ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ.

ಜಿಲ್ಲೆಯ ಪಕ್ಷಿ ಪ್ರೇಮಿಗಳ ಬಹುದಿನಗಳ ಕನಸಾಗಿದ್ದ ತಾಲ್ಲೂಕಿನ ಅಂಕಸಮುದ್ರ ಹೈದರಾಬಾದ್‌ ಕರ್ನಾಟಕದ ಮೊದಲ ಸಂರಕ್ಷಿತ ಪಕ್ಷಿಧಾಮ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 12 ಕಿಮೀ ದೂರದಲ್ಲಿರುವ ತುಂಗಭದ್ರಾ ಹಿನ್ನೀರು ಪ್ರದೇಶ ಇರುವ ಅಂಕಸಮುದ್ರ ಕೆರೆಯ 244 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಾವಿರಾರು ಕರಿಜಾಲಿ ಮರಗಳಿದ್ದು, ಅದರಲ್ಲಿ ದೇಶ ವಿದೇಶಗಳ 140ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಇಲ್ಲಿ ಬಂದು ನೆಲೆಸುತ್ತಿವೆ. ಕೆಲವು ಸಂತಾನೋತ್ಪತ್ತಿ ನಡೆಸುತ್ತಿವೆ.

ಬಣ್ಣದ ಕೊಕ್ಕರೆ (ಪೇಂಟೆಡ್‌ ಸ್ಟಾರ್ಕ್‌), ಬೂದು ಬಕ(ಗ್ರೇ ಹೆರಾನ್‌), ಇರಳು ಬಕ( ನೈಟ್‌ ಹೆರಾನ್‌), ನೀರುಕಾಗೆ (ಕಾರ್ಮೋರೆಂಟ್‌), ಗೋವಕ್ಕಿ (ಕ್ಯಾಟಲ್‌ ಈಗ್ರೇಟ್‌), ಹೆಜ್ಜಾರ್ಲೆ( ಪೆಲಿಕಾನ್ಸ್‌), ಕಬ್ಬಕ್ಕಿಗಳು, ಕೊಕ್ಕರೆ, ವಿವಿಧ ಜಾತಿಯ ಬಾತುಕೋಳಿಗಳು  ಸೇರಿದಂತೆ ನೂರಾರು ಪ್ರಭೇದಗಳ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಬದುಕು ಕಂಡುಕೊಂಡಿವೆ.

ಕೆರೆಯನ್ನು ಪಕ್ಷಿಧಾಮ ಎಂದು ಘೋಷಿಸುವಂತೆ ಗ್ರಾಮದ ಜನಪ್ರತಿನಿಧಿಗಳು, ಯುವ ಬ್ರಿಗೇಡ್‌ ಸದಸ್ಯರು ಪಕ್ಷಿ ತಜ್ಞ ಸಮದ್‌ ಕೊಟ್ಟೂರು,  ವಿಜಯ್‌ಕುಮಾರ್ ಇಟ್ಟಗಿ ಅವರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಈ ಕುರಿತಂತೆ ಮನದಟ್ಟು ಮಾಡಿಕೊಟ್ಟ ಪರಿಣಾಮ ಈಗ ಅಧಿಕೃತವಾಗಿ ಸಂರಕ್ಷಿತ ಪಕ್ಷಿಧಾಮದ ಮುದ್ರೆ ಒತ್ತಿದಂತಾಗಿದೆ. ಅಂತೆಯೇ ಜ. 31ರಂದು ರಾಜ್ಯ ಸರ್ಕಾರ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಅಂಕಸಮುದ್ರ ಪಕ್ಷಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ.

ಇದರಿಂದಾಗಿ ಪಕ್ಷಿಧಾಮದಲ್ಲಿ ಕಾವಲು ಪಡೆ, ವೀಕ್ಷಣಾ ಗೋಪುರ, ಅತ್ಯಾಧುನಿಕ ಬೈನಾಕ್ಯೂಲರ್‌ ಯಂತ್ರಗಳು, ಸುತ್ತು ಗೋಡೆ ನಿರ್ಮಾಣದ ಜತೆಗೆ ಪಕ್ಷಿಗಳಿಗೆ ಸಂಪೂರ್ಣ ರಕ್ಷಣೆ ದೊರೆಯಲಿದೆ. ಗ್ರಾಮ ಇನ್ನುಮುಂದೆ ರಾಜ್ಯ ಪ್ರವಾಸದ ನಕ್ಷೆಯಲ್ಲಿ ಅತ್ಯುತ್ತಮ ಸ್ಥಾನ ಪಡೆಯಲಿದೆ.

ಕಳೆದ ಮೂರು ವರ್ಷಗಳಿಂದ ಕೆರೆಯಲ್ಲಿ ನೀರು ಬತ್ತಿದಾಗ ಗ್ರಾಮದ ಮುಖಂಡರು, ಯುವಕರು ತುಂಗಭದ್ರಾ ಹಿನ್ನೀರು ಹರಿಸಲು ಹಗಲು ರಾತ್ರಿ ಎನ್ನದೇ ಶ್ರಮ ಪಟ್ಟಿದ್ದರು, ವೆಂಕಾವಧೂತರ ಏತನೀರಾವರಿಯಿಂದ ನೀರು ಹರಿಸಿದ್ದರು. ಪಕ್ಷಿಗಳನ್ನು ರಕ್ಷಿಸಲು ಅವರೇ ಕಾವಲುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಪಕ್ಷಿ ತಜ್ಞ ಸಮದ್‌ ಕೊಟ್ಟೂರು ನೇತೃತ್ವದಲ್ಲಿ ಅನೇಕರು ಸರ್ಕಾರದ ಅರಣ್ಯ ಇಲಾಖೆಯ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯಭಾಸ್ಕರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಿ.ಹೊಸಮಠ್‌ ಸೇರಿದದಂತೆ ಇತರೆ ಅಧಿಕಾರಿಗಳಿಗ ಪಕ್ಷಿಧಾಮದ ಪ್ರಸ್ತಾವನೆಯನ್ನು ಸಲ್ಲಿಸಿದ್ದನ್ನು ಸ್ಮರಿಸಬಹುದು.

‘ಅಂಕಸಮುದ್ರ ಕೆರೆ ಪಕ್ಷಿಗಳ ಸಂರಕ್ಷಿತ ಪ್ರದೇಶ ಘೋಷಣೆಯಿಂದಾಗಿ ಗ್ರಾಮದಲ್ಲಿ ಅರಣ್ಯ ಸಮಿತಿ ರಚನೆಯಾಗಲಿದೆ. ಇನ್ನು ಮುಂದೆ ಸಂರಕ್ಷಿತ ಪಕ್ಷಿಧಾಮದ ಎಲ್ಲ ಅಭಿವೃದ್ಧಿ ಕಾರ್ಯಗಳು ರಾಜ್ಯ ಸರ್ಕಾರದಿಂದಲೇ ನಡೆಯುತ್ತವೆ, ವಿಶೇಷ ಅರಣ್ಯ ಕಚೇರಿ ಆರಂಭವಾಗಲಿದೆ.

ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಅಂಕಸಮುದ್ರ ಪಕ್ಷಿಧಾಮ ರಾಜ್ಯದ ಪ್ರವಾಸೋದ್ಯಮದ ನಕ್ಷೆಯಲ್ಲಿ ಸ್ಥಾನ ಪಡೆಯಲಿದೆ’ ಎಂದು ಪಕ್ಷಿ ತಜ್ಞ ಸಮದ್‌ ಕೊಟ್ಟೂರು ತಿಳಿಸಿದರು.

*
ಅಂಕಸಮುದ್ರ ಸಂರಕ್ಷಿತ ಪಕ್ಷಿಧಾಮವಾಗಿ ಘೋಷಣೆ ಆಗಿರುವುದರಿಂದ ಕೆರೆಯ ಸುತ್ತಲೂ ರಕ್ಷಣೆ ಗೋಡೆ ನಿರ್ಮಾಣವಾಗಲಿದೆ. ಎಲ್ಲ ಪಕ್ಷಿಗಳಿಗೂ ರಕ್ಷಣೆ ದೊರೆಯಲಿದೆ.
–ವಿಜಯ್‌ಕುಮಾರ್ ಇಟ್ಟಿಗಿ,
ಪಕ್ಷಿ ಪ್ರೇಮಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT