ADVERTISEMENT

ಸಾಹಿತ್ಯವನ್ನು ಮನೆ, ಮನಗಳಿಗೆ ತಲುಪಿಸಿದವರು ವಚನಕಾರರು ಹಾಗೂ ದಾಸಶ್ರೇಷ್ಠರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:40 IST
Last Updated 7 ನವೆಂಬರ್ 2017, 5:40 IST

ಸಂಡೂರು: 'ಹಳಗನ್ನಡ ಪಂಡಿತರಿಗಷ್ಟೇ ಸೀಮಿತವಾಗಿತ್ತು. ರಾಜಾಶ್ರಯದಲ್ಲಿದ್ದ ಸಾಹಿತ್ಯವನ್ನು ಎಲ್ಲರ ಮನೆ, ಮನಗಳಿಗೆ ತಲುಪಿಸಿದರು ವಚನಕಾರರು ಹಾಗೂ ದಾಸ ಪಂಥದವರು' ಎಂದು ಉಪನ್ಯಾಸಕ ಕೆ. ವಾಸುದೇವ ಭಟ್ ಅವರು ಅಭಿಪ್ರಾಯಪಟ್ಟರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.

'ಹರಿ ದಾಸರಲ್ಲಿ ದಾಸ ಶ್ರೇಷ್ಠರೆನಿಸಿದವರು ಕನಕದಾಸರು. ಕೀರ್ತನೆ, ಉಗಾಭೋಗ, ಮುಂಡಿಗೆಗಳಲ್ಲದೆ ಕಾವ್ಯಗಳನ್ನು ರಚಿಸಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಕೀರ್ತನೆ, ಕಾವ್ಯಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದರು. ಇಂತಹ ಮಹನೀಯರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ, ಉತ್ತಮ ಸಮಾಜ ನಿರ್ಮಾಣ' ಸಾಧ್ಯವೆಂದು ತಿಳಿಸಿದರು.

ತಹಶೀಲ್ದಾರ್ ಎಚ್.ಎಂ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಈ. ತುಕಾರಾಂ ಹಾಗೂ ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿದರು.  ಎಸ್ಸೆಸ್ಸೆಲ್ಸಿ ಹಾಗೂ ದ್ವಿತಿಯ ಪಿಯುಸಿಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಚ್. ಶಿವರಾಂ ಸ್ವಾಗತಿಸಿದರು. ಹೂಲೇಶ್ ಕಾರ್ಯಕ್ರಮ ನಿರೂಪಿಸಿದರು.

ADVERTISEMENT

ತಾ.ಪಂ. ಅಧ್ಯಕ್ಷೆ ಡಿ. ಫರ್ಜಾನಾ ಗೌಸ್ ಅಜಂ, ಉಪಾಧ್ಯಕ್ಷೆ ಗಂಗೂಬಾಯಿ ಚಂದ್ರನಾಯ್ಕ, ಇ.ಓ. ಜೆ.ಎಂ. ಅನ್ನದಾನಸ್ವಾಮಿ, ಪುರಸಭೆ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ, ಉಪಾಧ್ಯಕ್ಷ ಕೆ.ವಿ. ಸುರೇಶ್, ಎಪಿಎಂಸಿ ಅಧ್ಯಕ್ಷ ಭುವನೇಶ್‌ಮೇಟಿ, ಸದಸ್ಯ ಸದಾಶಿವ, ಕುರುಬರ ಸಂಘದ ತಾ.ಘಟಕದ ಅಧ್ಯಕ್ಷ ಕೆ.ವಿ. ಅಣ್ಣಪ್ಪ, ಪ್ರ.ಕಾರ್ಯದರ್ಶಿ ಕೆ. ಸತ್ಯಪ್ಪ, ರಾಜ್ಯ ಘಟಕದ ನಿರ್ದೇಶಕ ಜಿ. ಮಲ್ಲೇಶಪ್ಪ, ಕೆ. ನಿಂಗಮ್ಮ, ಕೆ.ವಿ. ಈರಣ್ಣ, ಕೊಂಡಾಪುರ ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.