ADVERTISEMENT

‘ಸುಳ್ಳು ಮಾಹಿತಿ ಬಗ್ಗೆ ಇರಲಿ ಎಚ್ಚರ’

ಚುನಾವಣಾ ಖರ್ಚು ವೆಚ್ಚ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 6:34 IST
Last Updated 7 ಏಪ್ರಿಲ್ 2018, 6:34 IST

ಕೂಡ್ಲಿಗಿ: ‘ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಉದ್ದೇಶದಿಂದ ರಾಜಕಾರಣಿಗಳು ಅಕ್ರಮ ನಡೆಸುತ್ತಾರೆ. ಅವುಗಳನ್ನು ತಡೆಯುವುದೇ ಮಾದರಿ ನೀತಿ ಸಂಹಿತೆಯ ಉದ್ದೇಶ’ ಎಂದು ಚುನಾವಣಾ ವೆಚ್ಚ ಮಿತಿಯ ಜಿಲ್ಲಾ ನೋಡಲ್ ಆಧಿಕಾರಿ ಚನ್ನಪ್ಪ ಹೇಳಿದರು.ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ನಿಗಾ ಮತ್ತು ಅಕ್ರಮಗಳ ತಡೆ ಕುರಿತು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿರುವ ವಿವಿಧ ಹಂತಗಳ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

‘ನಿಯಂತ್ರಣ ಕೊಠಡಿಗೆ ಬರುವ ದೂರುಗಳನ್ನು ಬೆನ್ನಟ್ಟಿ ವಿಸ್ತೃತ ಮಾಹಿತಿ ಸಂಗ್ರಹಿಸಿ ಕ್ರಮಕೈಗೊಳ್ಳಬೇಕು. ಫ್ಲೈಯಿಂಗ್ ಸ್ಕ್ವಾಡ್‌ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಚಾರ ಮಾಡುತ್ತಿರಬೇಕು. ಇದರಿಂದ ಅಕ್ರಮಗಳನ್ನು ತಡೆಯಲು ಸಹಕಾರಿಯಾಗುತ್ತದೆ. ನಿಮ್ಮ ಮೊಬೈಲ್‌ಗಳಿಗೆ ಯಾವುದೇ ಕರೆ ಬಂದರೂ ಸ್ವೀಕರಿಸಿ, ಕ್ರಮ ಜರುಗಿಸಬೇಕು. ಆದರೆ, ನಿಮ್ಮನ್ನು ದಾರಿ ತಪ್ಪಿಸಲೆಂದು ನಿಮಗೆ ಸುಳ್ಳು ಮಾಹಿತಿ ನೀಡುತ್ತಾರೆ. ಅಂಥವರ ಬಗ್ಗೆಯೂ ಜಾಗೃತರಾಗಿರಬೇಕು’ ಎಂದು ಎಚ್ಚರಿಸಿದರು.

ಚುನಾವಣಾ ವೆಚ್ಚ ಮಿತಿಗಳ ಸಹಾಯಕ ನೋಡಲ್ ಅಧಿಕಾರಿ ಜಗದೀಶ್, ಸಹಾಯಕ ಚುನಾವಣಾಧಿಕಾರಿ ಮೋತಿಲಾಲ್ ಕೃಷ್ಣ ಲಮಾಣಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಎನ್. ಸತೀಶ್ ರೆಡ್ಡಿ, ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ಇದ್ದರು.

ADVERTISEMENT

‘ನಿಗಾ ತಪ್ಪಿದರೆ ಕ್ರಮ’

ಸಂಡೂರು: ‘ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು ಇಡಬೇಕಾದ ಅಧಿಕಾರಿಗಳು ನಿಗಾ ತಪ್ಪಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಚುನಾವಣಾ ವೆಚ್ಚಗಳ ಜಿಲ್ಲಾ ನೋಡಲ್ ಅಧಿಕಾರಿ ಚೆನ್ನಪ್ಪ ಎಚ್ಚರಿಕೆ ನೀಡಿದರು.ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ವೆಚ್ಚ ಕುರಿತಂತೆ ಸಂಡೂರಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜಕೀಯ ಪಕ್ಷಗಳ ಗೋಡೆ ಬರಹ, ಚಿಹ್ನೆಗಳು, ಬ್ಯಾನರ್‌ಗಳು ಕಂಡು ಬಂದಲ್ಲಿ ಕೂಡಲೇ ತೆರವುಗೊಳಿಸಬೇಕು. ನೀತಿ ಸಂಹಿತೆ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದರು.‘ರಾಜಕೀಯ ಸಭೆ, ಕಾರ್ಯಕ್ರಮಗಳನ್ನು ತಡೆಯದೇ, ಅಲ್ಲಿನ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ವರದಿ ನೀಡಬೇಕು’ ಎಂದರು.

ಚುನಾವಣಾಧಿಕಾರಿ ಜಿ. ಮುನಿಯಪ್ಪ, ಸಹಾಯಕ ಚುನಾವಣಾಧಿಕಾರಿ ಎಚ್.ಎಂ. ರಮೇಶ್, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.