ADVERTISEMENT

ಸ್ಥಳೀಯರಿಗೆ ಉದ್ಯೋಗ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 7:05 IST
Last Updated 7 ಅಕ್ಟೋಬರ್ 2015, 7:05 IST

ನರಸಿಂಗಾಪುರ (ಸಂಡೂರು): ತಾಲ್ಲೂಕಿ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ ಎಂಡಿಸಿಯಲ್ಲಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಉದ್ಯೋಗ ನೀಡುವಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಲಾಗಿದೆ. ಈ ಕುರಿತು ಸಂಸ್ಥೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಶಾಸಕ ಈ. ತುಕಾರಾಂ ತಿಳಿಸಿದರು.

ಅವರು ಸೋಮವಾರ ತಾಲ್ಲೂಕಿನ ನರಸಿಂಗಾಪುರ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜನ ಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಂಸ್ಥೆಯ ಸುಮಾರು 250 ಉನ್ನತ ಹುದ್ದೆಗಳಿಗೆ ಉತ್ತರ ಭಾರತದವರನ್ನೇ ನೇಮಿಸಿಕೊಳ್ಳಲಾಗಿದೆ. ಇಲ್ಲಿಯ ಅದಿರನ್ನು ಸಂಸ್ಥೆ ಪಡೆಯುತ್ತಿದೆ. ಇಲ್ಲಿನ ಜನ ಸಂಸ್ಥೆಗೆ ಭೂಮಿಯನ್ನು ನೀಡಿದ್ದಾರೆ. ಇಲ್ಲಿನ ಪರಿಸರ ಹದಗೆಡುತ್ತಿದೆ. ಹೀಗಾಗಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸುವುದು ಅದರ ಕರ್ತವ್ಯ. ಇಷ್ಟರಲ್ಲೇ 600–700  ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆ ವೇಳೆ ಸ್ಥಳೀಯರಿಗೆ ಆದ್ಯತೆ ನೀಡ ದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗು ವುದು. ಈ ಕುರಿತು ವಿಧಾನ ಸೌಧದಲ್ಲಿ ಯೂ ಧ್ವನಿ ಎತ್ತಲಾಗುವುದು ಎಂದರು.

ರಸ್ತೆ ದುರಸ್ತಿಗೆ ಪ್ರಸ್ತಾವ: ಗ್ರಾಮಸ್ಥರಿಂದ ರಸ್ತೆ ದುರಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ದೊರೆಯಲಿರುವ ಅನುದಾನದಲ್ಲಿ ನವ ಲೂಟಿ, ರಾಜಾಪುರ ಹಾಗೂ ಎನ್‌ಎಂ ಡಿಸಿ ವರೆಗಿನ ರಸ್ತೆ ದುರಸ್ತಿಗೆ ₹42 ಕೋಟಿ ಅಂದಾಜು ಯೋಜನೆ ರೂಪಿಸ ಲಾಗಿದೆ. ಕೆಲವೇ ತಿಂಗಳಲ್ಲಿ ಹಣ ಬಿಡು ಗಡೆಯಾಗುವ ನಿರೀಕ್ಷೆ ಇದೆ ಎಂದರು.

ಕಂದಾಯ ಅಧಿಕಾರಿಗಳಿಗೆ ಸೂಚನೆ : ನರಸಿಂಗಾಪುರ ಸುತ್ತಮುತ್ತ ಸುಮಾರು 400 ಎಕರೆಯಷ್ಟು ಇನಾಂ ಭೂಮಿ ಇದ್ದು, ಅವುಗಳ ಸರ್ವೆ ಸೆಟ್ಲ್‌ಮೆಂಟ್ ಮಾಡಿ, ಅರ್ಹರಿಗೆ ಪಟ್ಟಾ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

14 ಅರ್ಜಿ : ಸಭೆಯಲ್ಲಿ ಒಟ್ಟು 14 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆ ಯಾದವು. ಗ್ರಾಮದಲ್ಲಿ  ಸ್ಮಶಾನಕ್ಕೆ ಜಾಗ, ಬಡವರಿಗೆ ನಿವೇಶನ, ಮನೆ ಮಂಜೂರು ಮಾಡುವುದು, ಆಕಾಶನಗರದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ, ಉದ್ಯೋಗ ನೀಡಿಕೆ, ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ, ದೂಳಿನ ಸಮಸ್ಯೆ ನಿವಾರಣೆ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಹಾಯ,  ಸ್ಥಳೀಯರಿಗೆ ಉದ್ಯೋಗಾ ವಕಾಶ ಒದಗಿಸುವುದು, ಜನರನ್ನು ಒಕ್ಕಲೆಬ್ಬಿಸದಂತೆ ತಡೆಯುವುದು ಮುಂತಾದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಕೋರಿ ಗ್ರಾಮಸ್ಥರು ಶಾಸಕರಿಗೆ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಪ್ಪ ಸ್ವಾಗತಿಸಿದರು. ಯರಿಸ್ವಾಮಿ ನಿರೂಪಿಸಿದರು. ಪಿಡಿಓ ಶ್ರೀನಿವಾಸ್ ವಂದಿಸಿದರು.  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗಂಟಿ ಕುಮಾರಸ್ವಾಮಿ, ಉಪಾಧ್ಯಕ್ಷೆ ಫಿರ್ದೋಸ್ ಬೇಗಂ, ಸದಸ್ಯೆ ಜ್ಯೋತಿ ಶ್ರೀನಿವಾಸ್, ಇಓ ಬಿ.ಎಂ.ಎಸ್.ವೀರಯ್ಯಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಪುಷ್ಪಾ ಶಿವಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಯರಿಸ್ವಾಮಿ, ಉಪಾಧ್ಯಕ್ಷೆ ಜಯಲಕ್ಷ್ಮಿ, ಗ್ರೇಡ್ 2 ತಹಶೀಲ್ದಾರ್ ರಾಘವೇಂದ್ರರಾವ್, ಸಿಪಿಐ ಮಲ್ಲೇಶ್ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.