ADVERTISEMENT

ಹಂಪಸಾಗರದಲ್ಲಿ ವಿಜೃಂಭಣೆಯ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:23 IST
Last Updated 9 ನವೆಂಬರ್ 2017, 5:23 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಗ್ರಾಮದಲ್ಲಿ ಗಂಗಾಂಬಿಕೆ ತೆಪ್ಪೋತ್ಸವದ ಹಿನ್ನಲೆಯಲ್ಲಿ ಅಲಂಕೃತ ತೆಪ್ಪವನ್ನು ಮೆರವಣಿಗೆ ನಡೆಸಲಾಯಿತು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ ಗ್ರಾಮದಲ್ಲಿ ಗಂಗಾಂಬಿಕೆ ತೆಪ್ಪೋತ್ಸವದ ಹಿನ್ನಲೆಯಲ್ಲಿ ಅಲಂಕೃತ ತೆಪ್ಪವನ್ನು ಮೆರವಣಿಗೆ ನಡೆಸಲಾಯಿತು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಸಾಗರ ಗ್ರಾಮದಲ್ಲಿ ಐತಿಹಾಸಿಕ ಗಂಗಾಂಬಿಕೆ ತೆಪ್ಪೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಉತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಆರಂಭದಲ್ಲಿ ಗ್ರಾಮದ ಚೌಕಿ ಮನೆಯಲ್ಲಿ ಗಂಗಾಂಬಿಕೆ ಉತ್ಸವ ಮೂರ್ತಿ ಹೊಂದಿರುವ ಅಲಂಕೃತ ತೆಪ್ಪಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರಾದ ಅಂಬಿಗರ ಪಾಲಾಕ್ಷಮ್ಮ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು.ನಂತರ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಬಳಿಯ ತುಂಗಭದ್ರಾ ನದಿ ಪಾತ್ರದವರೆಗೂ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ಉದ್ದಕ್ಕೂ ಗಂಡಾರತಿಯನ್ನು ಮಹಿಳೆಯರು ಕಂಬಳಿ ಮತ್ತು ಮೊರಗಳ ನಡುವೆ ರಕ್ಷಿಸಿ, ನದಿ ದಂಡೆಗೆ ತಲುಪಿಸಿದರು. ಸಂಜೆ ನದಿ ಬಳಿ ಗಂಗಾಂಬಿಕೆ ಹೊತ್ತ ತೆಪ್ಪಕ್ಕೆ ಪೂಜೆ ಸಲ್ಲಿಸಿ, ಬಳಿಕ ದೋಣಿ ರೂಪದ ತೆಪ್ಪದಲ್ಲಿ ಗಂಡಾರತಿ ಸ್ಥಾಪಿಸಿ ನದಿಯಲ್ಲಿ ತೇಲಿ ಬಿಡಲಾಯಿತು. ಮುಂದೆ ಆರತಿ ದೊರೆಯುವ ಗ್ರಾಮದಲ್ಲಿ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದ ಬಂದ ಸಂಪ್ರದಾಯವಾಗಿದೆ.

ADVERTISEMENT

ತೆಪ್ಪೋತ್ಸವದ ಹಿನ್ನೆಲೆ
ವಿಜಯನಗರದ ಅರಸರು ತಮ್ಮ ರಾಜ್ಯದ ಮೇಲೆ ರಜಾಕರು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನಾಭರಣವನ್ನು ಆನೆ ಮತ್ತು ಒಂಟೆಗಳ ಮೇಲೆ ಸಾಗಿಸಿದ್ದರಂತೆ. ಈ ಆಭರಣಗಳನ್ನು ಹೊತ್ತ ಆನೆ, ಒಂಟೆಗಳು ತುಂಗಭದ್ರಾ ನದಿಯ ದಂಡೆಯ ಬಳಿ ನಿಂತಿದ್ದವು. ಇಲ್ಲಿಂದ ನದಿದಾಟಿ ಮುತ್ತೂರರ ಕುಟುಂಬದವರ ಮನೆ ಬಳಿ ಬಂದು ನಿಂತಿದ್ದವು.

ಅಲ್ಲಿನ ಹಿರಿಯರು ಸಂಪತ್ತೆನ್ನೆಲ್ಲಾ ಪಡೆದರು. ಪ್ರಾಣಿಗಳ ಹೆಜ್ಜೆಗಳನ್ನು ಗುರುತಿಸಿದ ರಜಾಕರು ಸಂಪತ್ತು ತರಲು ಮತ್ತೇ ಹೋಗುತ್ತಾರೆ. ಇದನ್ನು ಅರಿತ ಮುತ್ತೂರರ ಹಿರಿಯರೆಲ್ಲಾ ಸೇರಿ ಗಂಗಾಬಿಕೆಯನ್ನು ಪ್ರಾರ್ಥಿಸಿದ ಫಲವಾಗಿ ನದಿ ನೀರು ಭಾರಿ ರಭಸದಿಂದ ಹರಿದು ಬಂತು. ಆಗ ರಜಾಕರೆಲ್ಲ ನೀರಿನಲ್ಲಿ ಕೊಚ್ಚಿ ಹೋದರು.

ಗಂಗಾಬಿಕೆಯ ಶಕ್ತಿಯ ನೆನಪಿಗಾಗಿ ಕಳೆದ 200 ವರ್ಷಗಳಿಂದ ಹಬ್ಬ ಆಚರಿಸಲಾಗುತ್ತಿದೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ. ಹಬ್ಬದ ಉಸ್ತುವಾರಿಯನ್ನು ಮುಖಂಡ ಲಿಂಗದಹಳ್ಳಿ ಬಸವರಾಜಪ್ಪ, ಕರೆಂಗಿ ಸುಭಾಷ್, ಬ್ರಹ್ಮಾನಂದ, ಶೇಖರಯ್ಯ, ದಕ್ಷಿಣಮೂರ್ತಿ, ಅಹಮದ್ ಸಾಬ್, ಸೊನ್ನದ ಶ್ರೀಶೈಲಪ್ಪ, ಟಿ.ಕೊಟ್ರಬಸಪ್ಪ, ಅರಲೂರು ಬಸವರಾಜ, ಜಂಗಳಿ ಆನಂದ ವಹಿಸಿದ್ದರು. ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನವಲಿ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.