ADVERTISEMENT

ಹೆಗಡೆ, ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 8:29 IST
Last Updated 29 ಡಿಸೆಂಬರ್ 2017, 8:29 IST

ಬಳ್ಳಾರಿ: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಹೆಗಡೆ ಅವರ ಪ್ರತಿಕೃತಿ ದಹಿಸಿ ಗುರುವಾರ ಪ್ರತಿಭಟನೆ ನಡೆಸಿದರು.

‘ಹೆಗಡೆ ಅವರು ಸಂವಿಧಾನವನ್ನು ಮನು ಸ್ಮೃತಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ. ಅಲ್ಲದೇ, ಜಾತ್ಯಾತೀತರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅವರ ಕೀಳುಮಟ್ಟದ ಮನಸ್ಥಿತಿಯನ್ನು ತಿಳಿಸುತ್ತದೆ. ಸಂವಿಧಾನ ಸಮಾನತೆಯ ಆಶಯದ ಮೇಲೆ ರಚಿತವಾಗಿದೆ.

ಹಾಗಾಗಿ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಸಮಿತಿ ಜಿಲ್ಲಾ ಸಂಚಾಲಕ ಜಿ.ಗೋವರ್ಧನ ಎಚ್ಚರಿಸಿದರು. ಬಳಿಕ ಗಡಿಗಿ ಚೆನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮುಂಡ್ರಿಗಿ ನಾಗರಾಜ, ಕೊಡ್ಲ ಮಲ್ಲಿಕಾರ್ಜುನ, ವೀರಭದ್ರಪ್ಪ, ರಾಜ, ನಟರಾಜ, ಶಿವಣ್ಣ ಸಾಲುಮನೆ, ನಿಂಗಪ್ಪ ಭಾಗವಹಿಸಿದ್ದರು.

ADVERTISEMENT

ಗಡಿಪಾರು ಮಾಡಿ: ಹೆಗಡೆ ಅವರನ್ನು ಸಂಪುಟದಿಂದ ಕೈ ಬಿಟ್ಟು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಹೆಗಡೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಗುರುವಾರ ಪ್ರತಿಭಟನೆ ನಡೆಸಿದರು.

‘ಹೆಗಡೆ ಅವರು ಸಂವಿಧಾನ ಬಗ್ಗೆ ಹಗುರವಾಗಿ ಹೇಳಿಕೆ ನೀಡಿ ಶೋಷಿತರ, ದಲಿತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅಲ್ಲದೇ ಅಂಬೇಡ್ಕರ ಅವರ ಸಮಾನತೆಯ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಸಚಿವರ ಮಾತಿನಿಂದ ದೇಶದ ಶಾಂತಿಗೆ ಭಂಗವಾಗುತ್ತಿದೆ. ಹಾಗಾಗಿ ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ’ ಎಂದು ಪಕ್ಷದ ಜಿಲ್ಲಾ ನಗರ ಘಟಕದ ಅಧ್ಯಕ್ಷ ಜಿ.ಎಸ್.ಮೊಹಮ್ಮದ್‌ ರಫೀಕ್‌ ಆಗ್ರಹಿಸಿದ್ದಾರೆ.

ಮುಖಂಡರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎ.ಮಾನಯ್ಯ, ನಿರಂಜನ್‌ ನಾಯ್ಡು, ಡಿ.ವಿ.ಶಿವಯೋಗಿ, ಜಿ.ವೆಂಕಟರಮಣ, ಎಂ.ಬಿ.ಪಾಟೀಲ್, ಕಲ್ಲುಕಂಬ ಪಂಪಾಪತಿ, ಎಲ್‌.ಮಾರೆಣ್ಣ, ರಾಮಪ್ರಸಾದ್, ಅಸುಂಡಿ ಹೊನ್ನುರಪ್ಪ, ವಿ.ಕೆ.ಬಸಪ್ಪ, ಯತೀಂದ್ರ, ಅರುಣ್‌ ಕುಮಾರ, ಎರೆಕಲ್ಲು ಸ್ವಾಮಿ, ವೆಂಕಟೇಶ ಇದ್ದರು.

ಗಡಿಪಾರಿಗೆ ಆಗ್ರಹ

ಕಂಪ್ಲಿ: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಗಡೀಪಾರು, ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಮತ್ತು ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರ ನೀಡದಂತೆ ಜಾತ್ಯತೀತರ ವೇದಿಕೆ (ಸರ್ವ ಸಂಘಟನೆಗಳ ಒಕ್ಕೂಟ) ಆಗ್ರಹಿಸಿದೆ.

ಈ ಸಂಬಂಧ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಉಪ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವೇದಿಕೆ ಕಾರ್ಯದರ್ಶಿ ಕೆ. ಲಕ್ಷ್ಮಣ ಮಾತನಾಡಿ, ‘ಅನಂತಕುಮಾರ್ ಹೆಗಡೆಯವರನ್ನು ಸಚಿವ ಸ್ಥಾನದಿಂದ ತೆಗೆದು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಸಿ. ವೆಂಕಟೇಶ್, ಕೋಶಾಧ್ಯಕ್ಷ ಜಿ. ರಾಮಣ್ಣ, ಪ್ರಮುಖರಾದ ಎಂ.ಸಿ. ಮಾಯಪ್ಪ, ಬಿ. ರಮೇಶ್, ಎ. ರೇಣುಕಪ್ಪ, ಬಿ. ಸಿದ್ದಪ್ಪ, ಬಿ. ಜಾಫರ್, ಎಚ್.ಪಿ. ಶಿಕಾರಿ ರಾಮು, ಬಿ. ದೇವೇಂದ್ರ, ಕರೇಕಲ್ ಮನೋಹರ, ಬಿ.ಕೆ. ವಿರೂಪಾಕ್ಷಿ, ಕೆ. ತಿಮ್ಮಯ್ಯ, ಎನ್. ರಾಮಾಂಜನೇಯಲು, ಎಂ. ಗೋಪಾಲ್, ಕೆ. ಮೆಹಬೂಬ್, ಪಿ. ಪಾಂಡುರಂಗ ಇದ್ದರು.

ಸಂಚಾರ ಅಸ್ತವ್ಯಸ್ತ
ಎರಡು ಪ್ರತಿಭಟನೆಗಳಿಂದ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಯಿತು. ಮೂರು ಬದಿಯ ರಸ್ತೆಯಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲದೇ, ಪ್ರತಿಕೃತಿಗಳನ್ನು ಸುಟ್ಟಿದ್ದರಿಂದ ದಟ್ಟ ಹೊಗೆ ಆವರಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.