ADVERTISEMENT

‘ಗಡಿನಾಡ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ’

​ಪ್ರಜಾವಾಣಿ ವಾರ್ತೆ
Published 4 ಮೇ 2016, 9:43 IST
Last Updated 4 ಮೇ 2016, 9:43 IST

ಡಿ.ಹಿರೇಹಾಳ್‌ (ಅನಂತಪುರ ಜಿಲ್ಲೆ): ‘ಕರ್ನಾಟಕದಲ್ಲಿ ಗಡಿನಾಡ ಕನ್ನಡಿಗರಿಗೆ ಶೇ 5ರಷ್ಟು ಉದ್ಯೋಗ ಅವಕಾಶ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ ಭರವಸೆ ನೀಡಿದರು.

ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘವು ಸೋಮವಾರ ಡಿ.ಹಿರೇಹಾಳ್ ಗ್ರಾಮದ ಜಿಲ್ಲಾ ಪರಿಷತ್‌ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಗಡಿನಾಡ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆ ಮಾಡಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ನೆರೆಯ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಉದ್ಯೋಗ ಅವಕಾಶ ಸಿಗುತ್ತಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಕುರಿತು ಕರ್ನಾಟಕ ಸರ್ಕಾರದ ಗಮನ ಸೆಳೆಯಲಾಗಿದೆ. ಉದ್ಯೋಗದಲ್ಲಿ ಶೇಕಡ 5ರಷ್ಟು ಮೀಸಲಾತಿಯನ್ನು ಕಲ್ಪಿಸುವಂತೆ ಕೋರಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ದೊರೆಯುವ ಪಠ್ಯಪುಸ್ತಕ, ಸಮವಸ್ತ್ರ, ಶೂ ಭಾಗ್ಯ ಯೋಜನೆಗಳನ್ನು ಗಡಿನಾಡ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದರು.

ಆಂಧ್ರಪ್ರದೇಶದ ಶಾಸಕ ಕಾಲವ ಶ್ರೀನಿವಾಸಲು ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಮುರಳಿಧರ, ಮುಖಂಡ ಶ್ರೀರಾಮುಲು, ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಜಾಪತಿ ಮಠ, ಮಂಡಲ ಪಂಚಾಯಿತಿ ಅಧ್ಯಕ್ಷೆ ಪುಷವತಿ, ಪಿಡಿಓ ಲಕ್ಷ್ಮಿದೇವಿ, ಕೆಂಚಪ್ಪ ಕರೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.