ADVERTISEMENT

‘ಪರಂಪರೆ ಓರೆಗೆ ಹಚ್ಚಿದ ಚೇತನ’

ಎ.ಕೆ. ರಾಮಾನುಜನ್ ಸಮಗ್ರ ಸಾಹಿತ್ಯ ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2016, 8:53 IST
Last Updated 30 ಮಾರ್ಚ್ 2016, 8:53 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ‘ಪ್ರೊ.ಎ.ಕೆ. ರಾಮಾನುಜನ್‌ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ’ವನ್ನು ವಿದ್ವಾಂಸ ಪ್ರೊ.ಸಿ.ಎನ್‌. ರಾಮಚಂದ್ರನ್‌ ಉದ್ಘಾಟಿಸಿದರು. ಡಾ. ವೆಂಕಟೇಶ್ ಇಂದ್ವಾಡಿ, ಪ್ರೊ.ಡಿ. ಪಾಂಡುರಂಗ ಬಾಬು, ಪ್ರೊ. ಮಲ್ಲಿಕಾ ಎಸ್‌.ಘಂಟಿ, ಪ್ರೊ. ಮಲ್ಲಿಕಾರ್ಜುನ ವಣೇನೂರು ಇದ್ದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ‘ಪ್ರೊ.ಎ.ಕೆ. ರಾಮಾನುಜನ್‌ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ’ವನ್ನು ವಿದ್ವಾಂಸ ಪ್ರೊ.ಸಿ.ಎನ್‌. ರಾಮಚಂದ್ರನ್‌ ಉದ್ಘಾಟಿಸಿದರು. ಡಾ. ವೆಂಕಟೇಶ್ ಇಂದ್ವಾಡಿ, ಪ್ರೊ.ಡಿ. ಪಾಂಡುರಂಗ ಬಾಬು, ಪ್ರೊ. ಮಲ್ಲಿಕಾ ಎಸ್‌.ಘಂಟಿ, ಪ್ರೊ. ಮಲ್ಲಿಕಾರ್ಜುನ ವಣೇನೂರು ಇದ್ದರು   

ಹೊಸಪೇಟೆ: ‘ಎರಡು ಸಾಂಸ್ಥಿಕ ಮತ್ತು ಸಾಹಿತ್ಯಗಳ ನಡುವೆ ಕೂಡುಗೆರೆಯಾಗಿ ಎ.ಕೆ.ರಾಮಾನುಜನ್‌ ತಮ್ಮ ಬದುಕಿನಲ್ಲಿ ಸಾಧನೆಯನ್ನು ಮಾಡಿದ್ದರು’ ಎಂದು ಹಿರಿಯ ವಿದ್ವಾಂಸ ಪ್ರೊ.ಸಿ.ಎನ್‌. ರಾಮಚಂದ್ರನ್‌ ಪ್ರತಿಪಾದಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ‘ಪ್ರೊ.ಎ. ಕೆ. ರಾಮಾನುಜನ್‌ ಅವರ ಸಮಗ್ರ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಅಮೂರ್ತ ವಸ್ತು ಅವರನ್ನು ಯಾವತ್ತೂ ಆಕರ್ಷಿಸಲಿಲ್ಲ, ಅವರದೆಲ್ಲವೂ ದೃಷ್ಟಿಗೋಚರ ವಸ್ತುಗಳ ಕುರಿತಂತೆ ಬರೆದಂತಹ ಕಾವ್ಯ. ತಾನು ಕಂಡಿದ್ದನ್ನು ಅತ್ಯಂತ ನಿಖರವಾಗಿ ಮತ್ತೊಬ್ಬರಿಗೆ ಕಾಣಿಸುವ ಗುಣ ಅವರ ಬರಹಗಳಲ್ಲಿತ್ತು’ ಎಂದು ಅವರು ವಿಶ್ಲೇಷಿಸಿದರು.

‘ಅಡಿಗರ ನವ್ಯ ಕಾವ್ಯವು ಎರಡು ತಲೆಮಾರಿಗೆ ಬೀರಿದ ಪ್ರಭಾವದಂತೆ ರಾಮಾನುಜನ್‌ ಬರಹಗಳು ಪ್ರಭಾವಿಸ ಲಿಲ್ಲ. ಏಕೆಂದರೆ ಇವರು ಬದುಕಿದ್ದಾಗ ಕನ್ನಡ ಸಾಹಿತ್ಯ ಲೋಕ ಇವರ ಸಾಹಿತ್ಯ ವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಾಮಾನುಜನ್‌ ಕಾವ್ಯದಲ್ಲಿ ಸಾಮಾಜಿಕ ಕಾಳಜಿ ಇಲ್ಲ ಎಂಬುದು ಅನೇಕ ವಿಮರ್ಶಕರ ವಾದವಾಗಿತ್ತು’ ಎಂದು ವಿವರಿಸಿದರು.

‘ಅವರು ಸಣ್ಣಕತೆಗಳಲ್ಲಿ ವಿವಿಧ ಪರಂಪರೆಗಳನ್ನು ಓರೆಗೆ ಹಚ್ಚಿದ್ದರು. ಅನುವಾದಕರಾಗಿ ಅನೇಕ ಪರಿಕಲ್ಪನೆಗಳನ್ನು ಜಾರಿಗೆ ತಂದರು. ಅವರ ಕಾವ್ಯಕ್ಕಿಂತ ಸಂಸ್ಕೃತಿ ಚಿಂತನೆಯ ಹತ್ತು ಹಲವು ಲೇಖನಗಳು ಮತ್ತು ಅನುವಾದಗಳು ಶಾಶ್ವತವಾಗಿ ಇವೆ. ದೇಶದಲ್ಲಿ ಸಂಸ್ಕೃತ ಹೊರತ ಪಡಿಸಿ ಬೇರೆ ಭಾಷೆ ಇದೆ ಎಂದು ತೋರಿಸಿಕೊಟ್ಟವರು ರಾಮಾನುಜನ್’ ಎಂದು ವಿಶ್ಲೇಷಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಮಾತನಾಡಿ ‘ರಾಮಾನುಜನ್‌ ಅವರನ್ನು ಇಂಗ್ಲಿಷ್‌ ಮತ್ತು ಕನ್ನಡ ಭಾಷಿಕರು ಮರೆತೇ ಬಿಟ್ಟಿದ್ದರು. ಎರಡೂ ಭಾಷೆಗಳು ಸಮಕಾಲೀನಗೊಳ್ಳದಿರುವ ಕಾರಣಕ್ಕಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲವೇನೊ? ಅವರ ಸಾಹಿತ್ಯ ವಿದ್ಯಾರ್ಥಿಗಳಿಗೆ ಪರಿಚ ಯವಾಗಲಿ ಎನ್ನುವ ಆಶಯದೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿದೆ’ ಎಂದರು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾ ಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ವಣೇನೂರು ಇದ್ದರು. ಡಾ.ವೆಂಕಟೇಶ್ ಇಂದ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ.ಡಿ. ಪಾಂಡುರಂಗಬಾಬು ಸ್ವಾಗತಿಸಿದರು. ಗಾದೆಪ್ಪ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.