ADVERTISEMENT

ಕನ್ನಡಾಂಬೆ ಸೇವೆಗೆ ಸದಾ ಸಿದ್ಧ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 9:05 IST
Last Updated 22 ಜನವರಿ 2018, 9:05 IST

ಬಳ್ಳಾರಿ: ‘ಕನ್ನಡದ ನಾಡು, ನುಡಿ ಹಾಗೂ ಜಲ ಸಂರಕ್ಷಣೆಗೆ ಸದಾ ಬದ್ಧ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.

ನಗರದ ಶೆಟ್ರು ಗುರುಶಾಂತಪ್ಪ ಕಾಲೇಜು ಮೈದಾನದಲ್ಲಿ ಶನಿವಾರ ಸಂಜೆ ವೇದಿಕೆಯಿಂದ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡಿಗರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗಡಿ ಭಾಗದಲ್ಲಿ ಹಲವು ಸಮಸ್ಯೆಗಳಿವೆ. ಈ ಕುರಿತು ವೇದಿಕೆಯು ನಿರಂತರ ಹೋರಾಟ ನಡೆಸುತ್ತಿದೆ. ಕನ್ನಡವೇ ನಮಗೆ ಜಾತಿ, ಧರ್ಮ’ ಎಂದು ನುಡಿದರು. ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ADVERTISEMENT

‘ನಿಜವಾದ ಕನ್ನಡಿಗರು ಎಂದರೇ ರೈತರು. ಅವರು ಭಾಷೆಯನ್ನು ಅತೀ ಹೆಚ್ಚು ಬಳಕೆ ಮಾಡುತ್ತಾರೆ. ಕನ್ನಡವನ್ನು ಉಳಿಸಬೇಕಾದರೆ ಕನ್ನಡ ಶಾಲೆಗೆ ಹೆಚ್ಚೆಚ್ಚು ‌ಮಕ್ಕಳನ್ನು ಸೇರಿಸುವ ಕೆಲಸವಾಗಬೇಕು. ಆಗ ಮಾತ್ರ ಭಾಷೆಗೆ ಶಕ್ತಿ ಬರಲು ಸಾಧ್ಯ’ ಎಂದರು. ಮುಖಂಡ ಎನ್.ಸೂರ್ಯನಾರಾಯಣ ರೆಡ್ಡಿ ಮಾತನಾಡಿದರು.

ಇದೇ ವೇಳೆಯಲ್ಲಿ ವಿದೇಶದಲ್ಲಿ ಕನ್ನಡ ಸೇವೆ ಮಾಡಿದ ಡಾ.ಸರ್ವೋತ್ತಮಶೆಟ್ಟಿ ಹಾಗೂ ಅನಂತಪುರ ಜಿಲ್ಲೆ ಡಿ.ಹಿರೇಗಹಾಳದಲ್ಲಿ ಕನ್ನಡಕ್ಕಾಗಿ ಶ್ರಮಿಸುತ್ತಿರುವ ಶೆಟ್ರು ಸುರೇಶ್ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಬೆಳಿಗ್ಗೆ ಕಮ್ಮಭವನದಿಂದ ಎಚ್‌.ಆರ್.ಗವಿಯಪ್ಪ ವೃತ್ತದವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ವಿವಿಧ ಜಾನಪದ ಕಲಾ ತಂಡದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್‌ ಶೇಖರ್, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ, ಕಾರ್ಯದರ್ಶಿ ಎಚ್‌.ಕೋಟ್ರಪ್ಪ ಉಪಸ್ಥಿತರಿದ್ದರು. ದಿವ್ಯಾ ಆಲೂರು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.