ADVERTISEMENT

ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವಾಗಿಲ್ಲ– ಕೆ. ಶಿವಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 9:42 IST
Last Updated 5 ಫೆಬ್ರುವರಿ 2018, 9:42 IST

ಸಂಡೂರು: ‘ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಜೈಲಿಗೆ ಹೋಗಿ ಬಂದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿಗಿಂತ ಭಿನ್ನವಲ್ಲ ಎಂಬುದನ್ನು ತೋರಿಸಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಿವಪ್ಪ ಲೇವಡಿ ಮಾಡಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಮತ್ತು ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪುನಶ್ಚೇತನ ಹಾಗೂ ಪುನರ್‌ವಸತಿ (ಆರ್‌ ಅಂಡ್‌ ಆರ್‌) ಕಾರ್ಯಕ್ರಮಕ್ಕೆ ₹10 ಸಾವಿರ ಕೋಟಿ ಸಂಗ್ರಹವಾಗಿದ್ದು, ಇದರಲ್ಲಿ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಆ ಹಣವನ್ನು ಕೊಳ್ಳೆ ಹೊಡೆಯಲು ಸಂಚು ರೂಪಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಗಣಿ ಕಂಪೆನಿ ಎಂಎಂಎಲ್ (ಮೈಸೂರ್ ಮಿನರಲ್ಸ್ ಲಿಮಿಟೆಡ್‌) ನಲ್ಲಿ ₹5351 ಕೋಟಿ ಹಗರಣ ನಡೆದಿದೆ. ಕಾಂಗ್ರೆಸ್ ಮುಖಂಡರು ಸರ್ಕಾರದ ಹಣದಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘2004ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಯ ಗಳಿಸಿದ್ದು, 2018ರ ಚುನಾವಣೆಯಲ್ಲಿ ಅದು ಮರುಕಳಿಸುವಂತೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಮುಖಂಡ ಹೇಮಯ್ಯಸ್ವಾಮಿ ಮಾತನಾಡಿ, ‘ಬಿಜೆಪಿಯು ತನ್ನ ಆಡಳಿತಾವಧಿಯಲ್ಲಿ ಹಗರಣಗಳಲ್ಲೇ ಮುಳುಗಿತ್ತು. ಕಾಂಗ್ರೆಸ್ ಕೂಡ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿದೆ ಎಂದು ಸರ್ವೆಗಳು ಹೇಳುತ್ತಿವೆ. ಲೋಕಾಯುಕ್ತವನ್ನು ಮೂಲೆಗೆ ತಳ್ಳಲಾಯಿತು. ಇಂತಹ ಸರ್ಕಾರಗಳಿಗೆ ಬುದ್ಧಿ ಕಲಿಸುವ ಸಮಯ ಈಗ ಬಂದಿದೆ. 20 ತಿಂಗಳ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನರು ನೋಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಹೇಳಿದರು.

ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾದ ಬಿ. ವಸಂತಕುಮಾರ್ ಹಾಗೂ ಎನ್. ಸೋಮಪ್ಪ, ಮುಖಂಡರಾದ ಗೌರೀಶ್,ಜಿ.ಕೆ. ಹನುಮಂತಪ್ಪ, ಸೋಮಲಿಂಗಪ್ಪ ವೈ. ಗೋಪಾಲ್, ಅನಿತಾ, ಹನಸಿ ದೇವರಾಜ್, ಲಾಲ್‌ಸ್ವಾಮಿ, ವಿಜಯಕುಮಾರಿ ಹಾಗೂ ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.