ADVERTISEMENT

ಅಪೂರ್ಣ ಕಾಮಗಾರಿಗೆ ಆಕ್ಷೇಪ

ದೇವನಹಳ್ಳಿಗೆ 28ಕ್ಕೆ ಮುಖ್ಯಮಂತ್ರಿ ಭೇಟಿ, ದಲಿತ ಮುಖಂಡರ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:55 IST
Last Updated 17 ಜುಲೈ 2017, 5:55 IST

ದೇವನಹಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 28 ರಂದು ಉದ್ಘಾಟಿಸಲಿರುವ ವಿವಿಧ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ವಿ.ಸ್ವಾಮಿ ಮತ್ತಿತರ ಪರಿಶಿಷ್ಟ ಸಮುದಾಯದ ಮುಖಂಡರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ಮತ್ತು ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತ ನಡೆದ ಪರಿಶಿಷ್ಟರ ಸಭೆಯಲ್ಲಿ ವಿವಿಧ ಮುಖಂಡರು ಮಾತನಾಡಿದರು.

‘ಮುಖಂಡರಾದ  ಎಂ.ಶ್ರೀನಿವಾಸ್‌, ಕುಮಾರ್‌, ಎಂ. ನಾರಾಯಣಸ್ವಾಮಿ ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌ ಮತ್ತಿತರ ದಲಿತ ಮುಖಂಡರ ಜೊತೆ ಸಂಬಂಧಿಸಿದವರು ಚರ್ಚೆ ನಡೆಸದೆ ಮುಖ್ಯಮಂತ್ರಿ ಕಾರ್ಯಕ್ರಮ ನಿಗದಿ ಮಾಡಿದ್ದಾರೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಸಮಾರಂಭದ ಬಗ್ಗೆ ಸಭೆ ನಡೆಸಿ ಅಗತ್ಯ ಸಲಹೆ ಪಡೆದುಕೊಂಡಿಲ್ಲ, ಹತ್ತಾರು ವರ್ಷಗಳ ಹೋರಾಟದ ಫಲವಾಗಿ ಅಂಬೇಡ್ಕರ್‌ ಭವನ ಮತ್ತು ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಭವನಕ್ಕೆ ಇನ್ನೂ ₹ 2 ಕೋಟಿ ಅನುದಾನ ಬರಬೇಕು’ ಎಂದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ಮತ್ತು ಕಂಚಿನ ಪ್ರತಿಭೆ ಅನಾವರಣವನ್ನು ಬೌದ್ಧ ಧರ್ಮದ ಸಂಪ್ರದಾಯದಂತೆ ನೆರವೇರಿಸಬೇಕು. ಬಟನ್‌ ಒತ್ತಿ ಉದ್ಘಾಟನೆ ಬೇಡ’ ಎಂದರು.

ತಹಶೀಲ್ದಾರ್‌ ಜಿ.ಎ. ನಾರಾಯಣಸ್ವಾಮಿ ಮಾತನಾಡಿ, ‘ಉದ್ಘಾಟನೆಯಾದರೂ ನಂತರ ಇದರ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಮುಖ್ಯಮಂತ್ರಿಗೆ ಸಮಯಾವಕಾಶ ಕಡಿಮೆ ಇರುವುದರಿಂದ ಆಯ್ಕೆ ಮಾಡಿ ಸೀಮಿತವಾಗಿ ಮುಖಂಡರ ಮನವಿಗೆ ಅವಕಾಶ ನೀಡಲಾಗುತ್ತದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ, ಸಹಾಯಕ ಪೊಲೀಸ್‌ ಆಯುಕ್ತ ಗುರುಪ್ರಸಾದ್‌, ಡಿವೈಎಸ್‌ಪಿ ಪಿ.ಶಿವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.