ADVERTISEMENT

ಆಸ್ಪತ್ರೆ ನಿರ್ಮಾಣಕ್ಕೆ ರೂ13.6 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 10:17 IST
Last Updated 24 ಜುಲೈ 2014, 10:17 IST

ದೊಡ್ಡಬಳ್ಳಾಪುರ:  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರು ವವರನ್ನು ಆ.15 ರಂದು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯಲಿರುವ 58ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅಭಿನಂದಿಸಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 58ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಆ.15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಭಾಗವಹಿಸುವ ನಗರದ ವಿವಿಧ ಶಾಲೆಗಳ 1,200 ಜನ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8 ಗಂಟೆಗೆ ಉಪಾಹಾರದ ವ್ಯವಸ್ಥೆ, ಮಳೆಗಾಲದಲ್ಲಿ ಕ್ರೀಡಾಂಗಣದ ಒಳಗೆ ನುಗ್ಗುವ ಚರಂಡಿ ನೀರು ತಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.

ನಗರದಲ್ಲಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ₨ 13.6 ಕೋಟಿಗೆ ಮಂಜೂರಾತಿ ದೊರೆಕಿದ್ದು ಸದ್ಯದಲ್ಲೇ ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗುವುದು. ಇದಲ್ಲದೆ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌  ನಿಲ್ದಾಣಕ್ಕೆ ಅಗತ್ಯ ಇರುವ ಸ್ಥಳ ಹಾಗೂ ಹೈಟೆಕ್‌ ಬಸ್‌ ನಿಲ್ದಾಣಕ್ಕೆ ತಗಲುವ ವೆಚ್ಚಕ್ಕೆ ಮಂಜೂರಾತಿ ನೀಡುವಂತೆ ಸಾರಿಗೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಹಾಗೂ ಚುನಾಯಿತಿ ಪ್ರತಿನಿಧಿಗಳು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಸಿ.ಮಂಜುನಾಥ್‌, ತಹಶೀಲ್ದಾರ್‌ ಎಂ.ಕೆ.ರಮೇಶ್‌, ಇಇಒ ಕೆ.ಅಶ್ವತ್ಥರೆಡ್ಡಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ರಮಾದೇವಿ ಎಚ್‌.ನಾರಾಯಣಪ್ಪ, ನಗರ ಸಭೆ ಅಧ್ಯಕ್ಷೆ ಶಂಷುನ್ನಿಸಾ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.