ADVERTISEMENT

ಈಡೇರದ ಉನ್ನತ ಶಿಕ್ಷಣದ ಗುರಿ: ಬೇಸರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 7:08 IST
Last Updated 13 ಮಾರ್ಚ್ 2017, 7:08 IST

ದೊಡ್ಡಬಳ್ಳಾಪುರ: ಸಂವಿಧಾನದ ಆಶಯವಾಗಿರುವ ಸಹೋದರತ್ವ, ಸಮಾನತೆ ರೂಪಿಸುವಲ್ಲಿ ಉನ್ನತ ಶಿಕ್ಷಣ ಸೋತಿದೆ ಎಂದು ಭಾಷಾತಜ್ಞ ಡಾ.ಕೆ.ವಿ.ನಾರಾಯಣ ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಒಡನಾಡಿ ಬಳಗದ ವತಿಯಿಂದ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಅವರ ಅಭಿನಂದನೆ ಹಾಗೂ ‘ಕನಸುಗಳಿಗೆ ರೆಕ್ಕೆ ಕಟ್ಟಿ ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಉನ್ನತ ಶಿಕ್ಷಣ ಇವತ್ತು ತನ್ನ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಉನ್ನತ ಶಿಕ್ಷಣವನ್ನು ರೂಪಿಸುವಲ್ಲಿ ಹಾಗೂ ಅದನ್ನು ಜಾರಿಗೊಳಿಸುವಲ್ಲಿಯೇ ನಾವು ಸೋತಿದ್ದೇವೆ ಎಂದು ಹೇಳಿದರು.

ADVERTISEMENT

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಕನ್ನಡಿಗರಲ್ಲಿ ಪುಸ್ತಕ ಕೊಂಡು ಓದುವ ಅಭ್ಯಾಸ ಕಡಿಮೆ. ಯಾವುದೇ ಕಾಲೇಜುಗಳಲ್ಲೂ ಕನ್ನಡ ಅಧ್ಯಾಪಕರು ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಹತ್ತಿರವಾಗುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮಾತನಾಡಿ, ಮಾತಿನ ಮೋಡಿ, ಹಣದ ಮೇಲೆ ಇವತ್ತು ಚುನಾವಣೆ  ನಡೆಯುತ್ತಿವೆ. ಇದರ ಪರಿಣಾಮವೇ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಎಂದು ಆರೋಪಿಸಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಎಂ.ಜಿ. ಚಂದ್ರಶೇಖರಯ್ಯ,ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉನ್ನತವಾದುದನ್ನು ಕಲಿಸಬೇಕು ಎನ್ನುವ ತುಡಿತ ಸದಾ ಇರಬೇಕು. ಆಗ ಮಾತ್ರ ಉನ್ನತ ಶಿಕ್ಷಣ ಕ್ರಿಯಾಶೀಲವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ಪರವಾಗಿ ಆಂಗ್ಲ ಪ್ರಾಧ್ಯಾಪಕ ಎಸ್‌.ನಾರಾಯಣನ್‌, ಮಂಜುನಾಥ್‌ ಅದ್ದೆ, ಡಾ.ನೆಲ್ಲುಕುಂಟೆ ವೆಂಕಟೇಶ್‌, ಉಪನ್ಯಾಸಕ ಕೆ.ವೆಂಕಟೇಶ್‌ ಮಾತನಾಡಿದರು.

**

ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಗೊಂಡಿದ್ದು ಹಣ, ಹೆಂಡದ ಮೇಲೆಯೇ ಚುನಾವಣೆ ನಡೆಸಲು ಪೈಪೋಟಿಗೆ ಇಳಿದಿವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಜನರು ಎಚ್ಚೆತ್ತುಕೊಳ್ಳಬೇಕು
–ಎಚ್.ಎಸ್‌. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.