ADVERTISEMENT

ಕಲ್ಲಂಗಡಿ, ಎಳನೀರಿಗೆ ಹೆಚ್ಚಿದ ಬೇಡಿಕೆ

ಬಿರು ಬಿಸಿಲಿನ ಧಗೆ, ಹಣ್ಣು– ಎಳನೀರಿಗೆ ಜನ ಮೊರೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 8:54 IST
Last Updated 3 ಮಾರ್ಚ್ 2017, 8:54 IST
ದೇವನಹಳ್ಳಿ ಹಳೆ ಬಸ್‌ ನಿಲ್ದಾಣದಲ್ಲಿ ಕಲ್ಲಂಗಡಿ ಹಣ್ಣು ದಾಸ್ತಾನು ಮಾಡಿಕೊಂಡಿರುವ ವ್ಯಾಪಾರಿ
ದೇವನಹಳ್ಳಿ ಹಳೆ ಬಸ್‌ ನಿಲ್ದಾಣದಲ್ಲಿ ಕಲ್ಲಂಗಡಿ ಹಣ್ಣು ದಾಸ್ತಾನು ಮಾಡಿಕೊಂಡಿರುವ ವ್ಯಾಪಾರಿ   

ದೇವನಹಳ್ಳಿ: ಬಯಲು ಸೀಮೆ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಿರು ಬಿಸಿಲಿನ ಧಗೆಯಿಂದಾಗಿ ಭರ್ಜರಿ ಕಲ್ಲಂಗಡಿ ಹಣ್ಣು ಮತ್ತು ಎಳನೀರು ಮಾರಾಟ ಹೆಚ್ಚಾಗಿದೆ.
ಜನವರಿಯಿಂದಲೇ ಬಿಸಿಲಿನ  ತಾಪ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪ್ರಸ್ತುತ ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ, ಕಲ್ಲಂಗಡಿ ಬೆಳೆ ತಾಲ್ಲೂಕಿನಲ್ಲಿ ಚನ್ನರಾಯಪಟ್ಟಣ ಮತ್ತು ಕಸಬಾ ಹೋಬಳಿಯಲ್ಲಿ 45 ರಿಂದ 50 ಹೆಕ್ಟೇರ್ ನಲ್ಲಿ ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ತೆಂಗಿನಕಾಯಿ ತೋಟಗಳು ರೈತರ ನೀರಾವರಿ ತೋಟಗಾರಿಕೆ ಬೆಳೆ ವ್ಯಾಪ್ತಿಯಲ್ಲಿರುವ ಜಮೀನು ಬದುಗಳ ಸಾಲಿನಲ್ಲಿ ಇದ್ದರೂ, ಬರಿ ತೆಂಗು ಬೆಳೆಯನ್ನು ಆಧರಿಸಿರುವ ಬೆಳೆಗಾರರು ಕಡಿಮೆ. ಬಹುತೇಕ ಹೊರ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕದಲ್ಲಿ ಕಲ್ಲಂಗಡಿ ಮತ್ತು ಎಳನೀರು ಮಾರಾಟ ವಹಿವಾಟು ಜೋರಾಗಿ ನಡೆಯುತ್ತಿದೆ.

ಎಳನೀರು ಮಾರಾಟಗಾರರು ಸೈಕಲ್ ಮೇಲೆ, ಆಟೋಗಳಲ್ಲಿ ಸಂಚರಿಸುತ್ತಾ ಮತ್ತು ಅಲ್ಲಲ್ಲಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಿದರೆ, ಕಲ್ಲಂಗಡಿ ಮಾರಾಟಗಾರರು ಅಲ್ಲಲ್ಲಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಪ್ರಸ್ತುತ ತಾಲ್ಲೂಕಿನ ಆರು ಸಂಪರ್ಕ ರಸ್ತೆಗಳು ದೇವನಹಳ್ಳಿ ಪಟ್ಟಣದ ಎರಡು ಬೈಪಾಸ್ ರಸ್ತೆ ಅಕ್ಕಪಕ್ಕ 150ಕ್ಕೂ ಹೆಚ್ಚು ಟನ್ ಕಲ್ಲಂಗಡಿ ಹಣ್ಣುಗಳ ದಾಸ್ತಾನು ಮಾಡಿಕೊಂಡು ಮಾರಾಟ ನಡೆಸಲಾಗುತ್ತಿದೆ. 60ಕ್ಕೂ ಹೆಚ್ಚು ಅಂಗಡಿಗಳಿದ್ದು, ಒಂದು ಕೆ.ಜಿ ಕಲ್ಲಂಗಡಿ ಹಣ್ಣು  ₹ 20 ರಿಂದ 30 ರವರೆಗೂ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕಳೆದ ವರ್ಷ 60 ರಿಂದ 70 ಟನ್ ಅಂದಾಜು ದಾಸ್ತಾನು ಇತ್ತು. ರಥೋತ್ಸವ ನಡೆದ ನಂತರ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು ಜೂನ್ ತಿಂಗಳವರೆಗೆ ಬಿಸಲು ವಿಪರೀತವಾಗುವ ಸಾಧ್ಯತೆ ಇರುವುದರಿಂದ,  ಪ್ರಸ್ತುತ ಎರಡು ತಿಂಗಳು ಕಲ್ಲಂಗಡಿ ಹಣ್ಣು ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವಾಗುವ ನಿರೀಕ್ಷೆ ಇದೆ ಎಂದು ಎನ್ನುತ್ತಾರೆ ಕಲ್ಲಂಗಡಿ ಹಣ್ಣು ಮಾರಾಟಗಾರ ಕೃಷ್ಣಪ್ಪ.

ಎಳನೀರು ಅತ್ಯಂತ ಶ್ರೇಷ್ಠ ಪಾನೀಯವಾಗಿದ್ದು,  ಪ್ರಸ್ತುತ ತಾಲ್ಲೂಕಿನಲ್ಲಿ ಎಳನೀರು ಕಡಿಮೆ ಎಂದರೂ ಮೂರು ದಿನ ದಾಸ್ತಾನು ಮಾತ್ರ, ತಾಜಾ ಎಳನೀರಿಗೆ ಗ್ರಾಹಕರರು ಒತ್ತು ನೀಡುವುದರಿಂದ ಕೊಯ್ಲು ಮಾಡಿದ ತಕ್ಷಣ ವಹಿವಾಟು ಅಗತ್ಯ. ಚಳಿಗಾಲದಲ್ಲಿ ₹20 ಇದ್ದ ಒಂದು ಎಳನೀರು ಕಾಯಿ ಬೆಲೆ ಪ್ರಸ್ತುತ ₹25 ರಿಂದ 30 ವರೆಗೆ ಇದೆ.

ತೆಂಗಿನ ಮರ ಹತ್ತುವ ಕಾರ್ಮಿಕರ ಕೊರತೆ ಇದ್ದು, ಸಾಗಾಣಿಕೆ ವೆಚ್ಚ, ದಿನದ ಕೂಲಿ ಲಾಭಾಂಶವನ್ನು ನೋಡಬೇಕು. ತೆಂಗಿನ ಕಾಯಿಗಿಂತ ಎಳನೀರು ಬೆಲೆ ಹೆಚ್ಚು ಇದೆ. ಬೇರೆಡೆಯಿಂದ ತಂದು ಮಾರಾಟ ಮಾಡಬೇಕು ಎನ್ನುತ್ತಾರೆ ಎಳನೀರು ಮಾರಾಟಗಾರ ನಾಗೇಶ್.

*
ಸಹಜವಾಗಿ ಬರುವ ಬೇಸಿಗೆ ಕಾಲದಲ್ಲಿ ಈ ಹಿಂದಿಗಿಂತ ಭೀಕರ ಉಷ್ಣಾಂಶ ಹೆಚ್ಚಾಗಲು ಹಸಿರೀಕರಣದ ಕೊರತೆ, ಗಿಡಮರಗಳ ಮಾರಣ ಹೋಮ ಕಾರಣ ಎನ್ನಲಾಗಿದೆ.
-ಶಿವನಾಪುರ ರಮೇಶ್, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT