ADVERTISEMENT

ಕೃಷಿ ಹೊಂಡಕ್ಕೆ ಹರಿದ ನೀರು

ದೇವನಹಳ್ಳಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ರಾಜ್ಯ ಸರ್ಕಾರದ ‘ಕೃಷಿ ಭಾಗ್ಯ’ ಯೋಜನೆ: ಬೆಳೆಗಳಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 8:13 IST
Last Updated 28 ಏಪ್ರಿಲ್ 2015, 8:13 IST

ದೇವನಹಳ್ಳಿ: ರಾಜ್ಯ ಸರ್ಕಾರ ಜಾರಿ  ತಂದ ‘ಕೃಷಿ ಭಾಗ್ಯ’ ಯೋಜನೆ ಅಡಿಯಲ್ಲಿ ರೈತರು ನಿರ್ಮಿಸಿದ ಕೃಷಿ ಹೊಂಡಗಳಿಗೆ ಇತ್ತೀಚೆಗೆ ಸುರಿದ ಮಳೆಯಿಂದ ಹರಿದ ನೀರು ರೈತರ ಮೊಗದಲ್ಲಿ  ಮಂದಹಾಸ ಮೂಡಿಸಿದೆ.

ತಾಲ್ಲೂಕು ಕೃಷಿ ಇಲಾಖೆ ವತಿಯಿಂದ 2014–15ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿ ಲಾಟರಿ ಮೂಲಕ ಆಯ್ಕೆಗೊಂಡ ಫಲಾನುಭವಿಗಳು ಸಂತಸಗೊಂಡಿದ್ದು, ತಮ್ಮ ಹೊಂಡದಲ್ಲಿ ಶೇಖರಣೆಗೊಂಡ ನೀರಿನ ಪ್ರಮಾಣಕ್ಕೆ ತಕ್ಕಂತೆ ಯಾವ ಬೆಳೆಗೆ ಮುಂದಾದರೆ ಲಾಭನಷ್ಟ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಪ್ರಸ್ತುತ ಇಲಾಖೆ ಮಾಹಿತಿಯಂತೆ 72 ರೈತರಿಗೆ ಕೃಷಿ ಭಾಗ್ಯ ಯೋಜನೆಗೆ  ಅರ್ಹತೆ ಪಡೆದಿದ್ದು, ಇದರಲ್ಲಿ ಪರಿಶಿಷ್ಟ ರೈತರಿಗೆ ಶೇಕಡ 90ರಷ್ಟು ಸಹಾಯಧನಕ್ಕೆ ಅರ್ಹರಾದರೆ ಸಾಮಾನ್ಯ ರೈತರಿಗೆ ಶೇಕಡ 80ರಷ್ಟು ಸಹಾಯಧನ ಎಂಬುದು ಇಲಾಖೆ ಮಾರ್ಗ ಸೂಚಿಯಾಗಿದೆ. ಕೃಷಿ ಹೊಂಡ ನಿರ್ಮಾಣಗೊಂಡ ನಂತರ ವಿದ್ಯುತ್ ಕಡಿತಗೊಂಡರೆ ಡೀಸೆಲ್ ಪಂಪ್ ಸೆಟ್ ಮತ್ತು ನೀರು ಮಿತ ಬಳಕೆಗೆ ಹನಿ ನೀರಾವರಿಗೂ ಸೌಲಭ್ಯ ಮುಂದುವರೆಯಲಿದೆ. ಪ್ರಸ್ತುತ 15 ಫಲಾನುಭವಿಗಳಿಗೆ ಡೀಸೆಲ್ ಪಂಪ್ ಮೋಟಾರ್ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ 72 ಕೃಷಿ ಹೊಂಡಗಳಲ್ಲಿ 15  ಪೂರ್ಣಪ್ರಮಾಣದಲ್ಲಿ ತುಂಬಿದ್ದು, ಉಳಿದ  ಹೊಂಡಗಳಲ್ಲಿ ಶೇಕಡ 50ರಿಂದ 75 ಭಾಗದಷ್ಟು ನೀರು ತುಂಬಿದೆ.

ಯೋಜನೆಯ ಮಾರ್ಗ ಸೂಚಿಯಂತೆ ಪ್ರತಿಯೊಂದು ಹೊಂಡ ವಿಸ್ತೀರ್ಣ 10ಅಡಿ ಅಗಲ, 10ಅಡಿ ಉದ್ದ ಕನಿಷ್ಠ ಇರಬೇಕು, ಪ್ರತಿಯೊಂದು ಹೊಂಡಕ್ಕೆ ಪಾಲಿಥಿನ್ ಸೀಟು ಸೇರಿ ₨41.377 ನಿಗದಿಗೊಳಿಸಲಾಗಿದೆ. ರೈತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ನಿರ್ಮಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಸ್ತುತ 2015–16 ನೇ ಸಾಲಿನ ಈ ಯೊಜನೆ ಮುಂದುವರಿಯಲಿದ್ದು, 200 ಅರ್ಹ ರೈತರಿಗೆ ಅವಕಾಶವಿದೆ. ಕೃಷಿ ಹೊಂಡ ಯೋಜನೆಗೆ ಅನುದಾನದ ಕೊರತೆ ಇಲ್ಲ. ಒಂದು ಎಕರೆ ಮಿತಿಯಲ್ಲಿ ಜಮೀನು ಹೊಂದಿರುವ ರೈತರು ಅರ್ಜಿ ಸಲ್ಲಿಸಿದರೆ ತ್ವರಿತವಾಗಿ ಇಲಾಖೆ ಪರಿಗಣನೆಗೆ ತೆಗೆದುಕೊಂಡು ಅನುಕೂಲ ಕಲ್ಪಿಸಿ ಕೊಡಲಾಗುತ್ತದೆ ಎಂಬುದು ಕೃಷಿ ಇಲಖೆ ಅಧಿಕಾರಿಗಳ ಅಭಿಪ್ರಾಯ.

ತಾಲ್ಲೂಕಿನಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಇಲ್ಲದೆ ಬಯಲು ಸೀಮೆಗೆ ಮಳೆಯಾಶ್ರಿತ ಖುಷಿ ಬೆಳೆಯೇ ಮೂಲ ಅಧಾರ. ಸಹಜವಾಗಿ ರಾಗಿ ತೊಗರಿ, ಮುಂಗಾರಿನ ಹಂಗಾಮಿನ ಬೆಳೆಯಾಗಿದ್ದು, ಸಕಾಲದಲ್ಲಿ ಮಳೆ ಬಂದರೆ ಮಾತ್ರ ಬೆಳೆ. ರಾಗಿ ಬಿತ್ತನೆಯಾದ 35ದಿನದಲ್ಲಿ ತನೆದಂಡು ಆರಂಭ. 65 ದಿನಗಳಲ್ಲಿ ತೆನೆಹಂತ ಮುಕ್ತಾಯ ನಂತರ ಹದ ಮಳೆ ಅತ್ಯಂತ ಅವಶ್ಯಕ. ಇದೇ ಸಂದರ್ಭದಲ್ಲಿ ತೊಗರಿ ಬೆಳೆಗೆ ಹೂವು ಬಿಡುವ ಹಂತದಿಂದ ಕಾಳು ಕಟ್ಟುವ ಹಂತದ ಸಮಯದ ಮಳೆ ವ್ಯತ್ಯಾಸವಾದರೆ ಬೆಳೆ ವಿಫಲವಾಗುತ್ತದೆ.
ಇಂತಹ ಸಂದರ್ಭದಲ್ಲಿ ಕೃಷಿ ಹೊಂಡದ ನೀರು ಬಳಕೆಗೆ ಸೂಕ್ತ. ಅಲ್ಲದೆ ಶೇಖರಣೆಗೊಂಡ ಮಳೆ ನೀರನ್ನು ಅಧರಿಸಿ ತರಕಾರಿ, ಸೊಪ್ಪು ಬೆಳೆಯಲು ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಫಲಾನುಭವಿಗಳ ಅಭಿಪ್ರಾಯ

ರೈತರಿಗೆ ವರದಾನ
‘ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ 8 ಗುಂಟೆಯಲ್ಲಿ ಕೃಷಿ ಹೊಂಡ ನಿರ್ಮಿಸಿದ್ದೇನೆ. ಇತ್ತೀಚೆಗೆ ಸುರಿದ ಮಳೆಯಿಂದ ಒಂದು ಲಕ್ಷ ಹತ್ತು ಸಾವಿರ ಲೀಟರ್ ನೀರು ಸಂಗ್ರಹವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಇದರಿಂದ ಟೊಮೆಟೊ ಬೆಳೆ ಬೆಳೆಸುವ ಉದ್ದೇಶವಿದೆ. ಈ ಯೋಜನೆ  ವರದಾನವಾಗಿದೆ’  ಎಂದು ರೈತ ಗೊಲ್ಲಹಳ್ಳಿ ಮುನಿಯಪ್ಪ ಹೇಳುತ್ತಾರೆ.

ಮುಖ್ಯಾಂಶಗಳು
* ಕೃಷಿ ಭಾಗ್ಯ ಯೋಜನೆಗೆ 72 ರೈತರ ಆಯ್ಕೆ
* ಸರ್ಕಾರದಿಂದ ಸಹಾಯ ಧನ ವಿತರಣೆ
* 2015–16 ನೇ ಸಾಲಿಗೆ 200 ಫಲಾನುಭುವಿಗಳಿಗೆ ಅವಕಾಶ

‘ತಾಲ್ಲೂಕಿನಲ್ಲಿ ಇಲ್ಲಿಯವರೆಗೂ ಕೃಷಿ ಭಾಗ್ಯ ಯೋಜನೆ ಅಡಿ ಒಟ್ಟು 72 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಒಂದೆರಡು ಬಾರಿ ಮಳೆ ಬಂದರೆ ಎಲ್ಲ ಹೊಂಡಗಳು ತುಂಬಲಿವೆ’
ಎಂ.ಎನ್.ಮಂಜುಳ,
ತಾಲ್ಲೂಕು ಸಹಾಯಕ ಕೃಷಿ ನಿರ್ದೆಶಕಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.