ADVERTISEMENT

ಖಾಸಗಿ ಬಡಾವಣೆಗೆ ಕೆರೆ ಮಣ್ಣು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:08 IST
Last Updated 4 ಸೆಪ್ಟೆಂಬರ್ 2015, 10:08 IST

ದೊಡ್ಡಬಳ್ಳಾಪುರ: ನಗರದ ಅಂಚಿನ ಅರಳುಮಲ್ಲಿಗೆ ಕೆರೆ ಅಂಗಳದ ಮಣ್ಣು ಖಾಸಗಿ ಬಡಾವಣೆ ನಿರ್ಮಾಣಕ್ಕೆ ಬಲಿಯಾಗಿದೆ. ಕೆರೆ ಅಂಗಳದಲ್ಲಿ ಸುಮಾರು 30 ರಿಂದ 40 ಅಡಿಗಳವರೆಗೆ ಮಣ್ಣು ತೆಗೆಯಲಾಗುತ್ತಿದ್ದು ಇದರಿಂದಾಗಿ ಕೆರೆ ಏರಿಗೂ ಅಪಾಯ ಉಂಟಾಗಿದೆ.

ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಕೊರೆಯಲಾಗಿರುವ ಕೊಳವೆಬಾವಿಗಳಿಂದಲೇ ನಗರಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಖಾಸಗಿ ಬಡಾವಣೆ ನಿರ್ಮಾಣಕ್ಕೆ ಬೃಹತ್‌ ಪ್ರಮಾಣದಲ್ಲಿ ಗುಂಡಿಗಳನ್ನು ತೆಗೆದು ಮಣ್ಣ ಹೊರಗೆ ಸಾಗಿಸುತ್ತಿರುವುದರಿಂದ ಕೊಳವೆಬಾವಿಗಳಿಗೆ ಮಳೆ ಬಂದಾಗ ಕೆಸರು ಹಾಗೂ ಕೊಚ್ಚೆ ನೀರು ಸೇರಲಿದೆ ಎನ್ನುತ್ತಾರೆ ಅರಳುಮಲ್ಲಿಗೆ ಗ್ರಾಮದ ನಿವಾಸಿ ಮುನಿನಂಜಪ್ಪ.

ತಾಲ್ಲೂಕಿನಲ್ಲೇ ಅತ್ಯಂತ ಹೆಚ್ಚು ವಿಸ್ತಾರವಾಗಿರುವ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಅರಣ್ಯ ಇಲಾಖೆ ವತಿಯಿಂದ ಬಿದಿರುಮೆಳೆ ಬೆಳೆಸಲಾಗಿದೆ. ಆದರೆ ಈಗ ಮಣ್ಣು ತೆಗೆಯುತ್ತಿರುವುದರಿಂದ ಬಿದಿರು ಹಾಗೂ ಹೊಂಗೆ ಮರಗಳು ನೆಲಕ್ಕುರುಳುತ್ತಿವೆ.

ಯಾವುದೇ ಕೆರೆಯಲ್ಲಿ ಹೂಳು ಅಥವಾ ಮಣ್ಣು ತೆಗೆಯುವಾಗಲೂ 4 ರಿಂದ 5 ಅಡಿಗಳಷ್ಟು ಆಳದವರೆಗೆ ಮಾತ್ರ ಮಣ್ಣು ತೆಗೆಯಬೇಕು. ಇಲ್ಲವಾದರೆ ಕೆರೆ
ಯಲ್ಲಿ ನೀರು ನಿಲ್ಲುವ ಸಾರ್ಥ್ಯವೇ ಇಲ್ಲವಾಗಲಿದೆ. ಈಗ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಅವೈಜ್ಞಾನಿಕವಾಗಿ ಬೃಹತ್‌ ಗುಂಡಿಗಳನ್ನು ತೆಗೆದು ಮಣ್ಣು ಹೊರಸಾಗಿಸಲಾಗಿದೆ.

ಇದರಿಂದ ಕೆರೆಗೆ ನೀರು ಬಂದರು ಹೆಚ್ಚು ದಿನ ನಿಲ್ಲದೆ ಇಂಗಿಹೋಗಲಿವೆ ಎನ್ನುತ್ತಾರೆ ಅರ್ಕಾವತಿ, ಕುಮದ್ವತಿ ನದಿ ಪುನಶ್ಚೇತನ ಹೋರಾಟ ಸಮಿತಿ ಸಂಚಾಲಕ ಮಂಜುನಾಥ್‌.

ಕಣ್ಣು ಮುಚ್ಚಿಕುಳಿತ ಅಧಿಕಾರಿಗಳು: ಅರಳುಮಲ್ಲಿಗೆ ಕೆರೆ ಏರಿಯ ಅಂಚಿನಲ್ಲೇ ಬೃಹತ್‌ ಪ್ರಮಾಣದಲ್ಲಿ ಮಣ್ಣು ತೆಗೆಯಲಾಗುತ್ತಿದೆ. ಕೆರೆ ಏರಿಯ ಮೇಲೆ ಪ್ರತಿದಿನ ತಾಲ್ಲೂಕಿನ ಹಿರಿಯ ಅಧಿಕಾರಿಗಳಿಂದ ಮೊದಲುಗೊಂಡು ನೂರಾರು ಜನ ಅಧಿಕಾರಿಗಳು ಒಡಾಡುತ್ತಾರೆ. ಆದರೆ ಯಾರೊಬ್ಬರು ಸಹ ಅವೈಜ್ಞಾನಿಕವಾಗಿ ಮಣ್ಣು ತೆಗೆಯುತ್ತಿರುವ ಬಗ್ಗೆ ಕಂಡೂ ಕಾಣದಂತೆ ಒಡಾಡುತ್ತಿದ್ದಾರೆ. ಅರಳು ಮಲ್ಲಿಗೆ ಕೆರೆ ಅಂಗಳದಲ್ಲಿ ಬಿದಿರು,  ಹೊಂಗೆ ಸೇರಿದಂತೆ ಇತರೆ ಮರಗಳು ಹೆಚ್ಚಾಗಿರುವುದರಿಂದ‌ ನವಿಲುಗಳು ಹೆಚ್ಚಾಗಿವೆ. ಕೆರೆ ಅಂಗಳದಲ್ಲಿ ಬೃಹತ್‌ ಪರಮಾಣದಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆಗೆಯುತ್ತಿರುವುದರಿಂದ ನವಿಲುಗಳ ವಾಸಕ್ಕೆ ಅಪಾಯವಾಗಲಿದೆ ಎಂದು ಪ್ರಾಣಿಪ್ರಿಯ ಮಂಜುನಾಥ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.