ADVERTISEMENT

ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸೈಕಲ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 6:19 IST
Last Updated 14 ಡಿಸೆಂಬರ್ 2017, 6:19 IST
ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸೈಕಲ್‌ ಜಾಥಾ
ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸೈಕಲ್‌ ಜಾಥಾ   

ದೊಡ್ಡಬಳ್ಳಾಪುರ: ತಾಲ್ಲೂಕು ಬಳಕೆದಾರರ ಹಿತರಕ್ಷಣಾ ಸಂಘ, ನಾಗದಳ, ಹಾಗೂ ಯುವ ಸಂಚಲನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸೈಕಲ್ ಜಾಥಾಗೆ ನಗರದ ಎಂ.ಎ.ಬಿ.ಎಲ್. ಪ್ರೌಢ ಶಾಲೆಯ ಮುಂಭಾಗದಿಂದ ಬುಧವಾರ ಚಾಲನೆ ನೀಡಲಾಯಿತು.

ಜಾಥಾಗೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಗಡಿನಾಡಿನಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಕನ್ನಡಿಗರ ಸ್ಥಿತಿ ಅತಂತ್ರವಾಗುತ್ತಿದೆ. ಕನ್ನಡದ ಸ್ಥಿತಿ ದಿನೇ ದಿನೇ ಶೋಚನೀಯವಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಗಡಿನಾಡ ಕನ್ನಡಿಗರ ಹಿತರಕ್ಷಣೆ ಮಾಡಬೇಕು. ಗಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದರು. ಕನ್ನಡ ನಾಡು ನುಡಿಗಳ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕನ್ನಡ ಜಾಗೃತಿ ಸೈಕಲ್ ಜಾಥಾದ ಆಯೋಜನೆ ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದರು.

ADVERTISEMENT

ತಾಲ್ಲೂಕು ಬಳಕೆದಾರರ ಹಿತರಕ್ಷಣಾ ಸಂಘದ ಸಂಚಾಲಕ ಸುಂ.ಸು.ಬದರಿನಾಥ್  ಮಾತನಾಡಿ, 10 ವರ್ಷಗಳಿಂದ 9 ಸೈಕಲ್ ಜಾಥಾಗಳನ್ನು ನಡೆಸಲಾಗಿದೆ. ಪ್ರತಿಯೊಂದು ವಿಭಿನ್ನ ವಿಷಯಗಳಿಗೆ ಸಂಬಂಧಿಸಿದೆ ಜಾಥ ನಡೆಸಲಾಗಿದೆ ಎಂದರು.

ಜಂಕ್ ಫುಡ್‌ಗಳ ದುಷ್ಪರಿಣಾಮ, ಆಹಾರ, ಆರೋಗ್ಯ, ಪರಿಸರ ಸಂರಕ್ಷಣೆ ಮೊದಲಾಗಿ ಈಗ ಕನ್ನಡ ರಾಜ್ಯೋತ್ಸವದ ಅಂಗವಾಗಿ 9ನೇ ಸ್ವಯಂಪ್ರೇರಿತ ಕನ್ನಡ ಜಾಗೃತಿ ಸೈಕಲ್ ಜಾಥಾವನ್ನು ಡಿ.13 ರಿಂದ 16 ರವರೆಗೆ ದೊಡ್ಡಬಳ್ಳಾಪುರದಿಂದ ನಮ್ಮ ರಾಜ್ಯದ ಗಡಿಭಾಗವಾದ ಮಧುಗಿರಿ, ವೈ.ಎನ್ ಹೊಸಕೋಟೆ, ಪಾವಗಡ ಹಾಗೂ ಆಂಧ್ರ ಪ್ರದೇಶದ ಹೆಚ್ಚು ಕನ್ನಡ ಭಾಷಿಕರಿರುವ ಮಡಕಶಿರ ತಾಲ್ಲೂಕುಗಳನ್ನು ಒಳಗೊಂಡಂತೆ ರಾಜ್ಯದ ಗಡಿ ಭಾಗದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ಜಾಥಾದಲ್ಲಿ, ಕನ್ನಡ ನಾಡು ನುಡಿಗಳ ಬಗ್ಗೆ ಅಭಿಮಾನ ಮೂಡಿಸುವ ಹಾಗೂ ಕನ್ನಡವನ್ನು ಹೆಚ್ಚಾಗಿ ಬಳಕೆಯ ಭಾಷೆಯಾಗಿ ಬಳಸಬೇಕೆನ್ನುವ ಸಂದೇಶ ಹೊತ್ತ ಕರಪತ್ರಗಳನ್ನು ಹಂಚಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾಮಿವಿವೇಕಾನಂದ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ, ಸ್ಪಂಧನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಅಮರನಾಥ್ ಸೈಕಲ್ ಜಾಥಾ ಹೊರಟಿರುವ ಚಿದಾನಂದ, ಮೋಹನ್,ಪುಷೋತ್ತಮ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.