ADVERTISEMENT

ಗಾಯಾಳು ಎಸ್‌ಐ ಆರೋಗ್ಯ ವಿಚಾರಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:23 IST
Last Updated 7 ನವೆಂಬರ್ 2017, 5:23 IST

ಆನೇಕಲ್‌ : ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ರೌಡಿಶೀಟರ್‌ ಧರ್ಮರಾಜ್‌ ಅಡ್ಡೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಗೊಂಡಿದ್ದ ಚಡಚಣ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಗೋಪಾಲ್‌ ಹಳ್ಳೂರ್‌ ಅವರನ್ನು ತಾಲ್ಲೂಕಿನ ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಗೋಪಾಲ್‌ ಹಳ್ಳೂರ್ ಅವರಿಗೆ ದುಷ್ಕರ್ಮಿಗಳು ಹಾರಿಸಿದ ಗುಂಡು ತಗುಲಿದ್ದು ವಿಜಯಪುರದಲ್ಲಿ ಗುಂಡನ್ನು ಹೊರತೆಗೆಯಲಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಮಲಿಂಗಾರೆಡ್ಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗೋಪಾಲ್‌ ಹಳ್ಳೂರ್‌ ಅವರ ಕಾರ್ಯದಕ್ಷತೆ ಶ್ಲಾಘನೀಯ. ಶೀಘ್ರದಲ್ಲಿ ಗುಣಮುಖರಾಗಲಿದ್ದು ಅವರಿಗೆ ರಜೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

ಮಹಾರಾಷ್ಟ್ರದಿಂದ ಅಕ್ರಮ ಶಸ್ತ್ರಾಸ್ತ್ರಗಳು, ನಾಡಪಿಸ್ತೂಲ್‌ಗಳು ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಇದನ್ನು ನಿಯಂತ್ರಿಸಲು ಮಹಾರಾಷ್ಟ್ರದ ಡಿಜಿ ಅವರ ಗಮನಕ್ಕೆ ಪತ್ರ ಮುಖೇನ ತಿಳಿಸಲಾಗುವುದು. ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅಕ್ರಮ ಶಸ್ತ್ರಾಸ್ತ್ರ ಸರಬರಾಜು ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ADVERTISEMENT

30ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರ ಫೋನ್‌ಗಳನ್ನು ಕೇಂದ್ರ ಸರ್ಕಾರ ಕದ್ಧಾಲಿಸುತ್ತಿದೆ ಎಂದು ಆರೋಪಿಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬಗ್ಗೆ ಬಹುತೇಕ ಮಾಹಿತಿಗಳು ಲಭ್ಯವಾಗಿದ್ದು ಇನ್ನೊಂದು ತಿಂಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುವುದು. 120ಕ್ಕೂ ಹೆಚ್ಚು ದಕ್ಷ ಪೊಲೀಸ್ ಅಧಿಕಾರಿಗಳು ಹಂತಕರ ಪತ್ತೆ ಹಾಗೂ ಸಾಕ್ಷ್ಯಧಾರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ ಎಂದರು.

ಆನೇಕಲ್ ಸುತ್ತಮುತ್ತ ಗಾಂಜಾ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ. ಸರಬರಾಜು ಮಾಡುವವರು, ಸೇವನೆ ಮಾಡುವವರು, ಮಾರಾಟ ಮಾಡುವವರು ಸೇರಿದಂತೆ ಎಲ್ಲರ ವಿರುದ್ಧವು ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ. ಗಾಂಜಾ ಸೇವಿಸಿ ವಿದ್ಯಾರ್ಥಿಗಳು ಸಿಕ್ಕಿ ಬಿದ್ದಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಕರೆಯಿಸಿ ಕೌನ್ಸೆಲಿಂಗ್ ಮಾಡುವಂತೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.