ADVERTISEMENT

ಜಾನುವಾರಿಗೆ ಸಿಗದ ಲಸಿಕೆ ಭಾಗ್ಯ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 6:25 IST
Last Updated 8 ಏಪ್ರಿಲ್ 2017, 6:25 IST
ವಿಜಯಪುರ ಪಟ್ಟಣದಲ್ಲಿ ಮಿಶ್ರತಳಿ ಹಸುಗಳನ್ನು ಸಾಕಿರುವ ರೈತ ಕುಟುಂಬ
ವಿಜಯಪುರ ಪಟ್ಟಣದಲ್ಲಿ ಮಿಶ್ರತಳಿ ಹಸುಗಳನ್ನು ಸಾಕಿರುವ ರೈತ ಕುಟುಂಬ   

ವಿಜಯಪುರ: ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಕಾಲುಬಾಯಿ ಜ್ವರವನ್ನು ನಿಯಂತ್ರಿಸಿ ಹೈನೋದ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಏಪ್ರಿಲ್ 7 ರಿಂದ 12 ನೇ ಸುತ್ತಿನ ಲಸಿಕೆ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದರೂ ತಾಲ್ಲೂಕಿನ ರೈತಾಪಿ ವರ್ಗದವರು ನಂಬಿಕೊಂಡಿರುವ ಹೈನುಗಾರಿಕೆಗೆ ಲಸಿಕಾ ಭಾಗ್ಯ ಸಿಕ್ಕಿಲ್ಲ.

ತಾಲ್ಲೂಕಿನ ನಿಲೇರಿ ಗ್ರಾಮದಲ್ಲಿ ರಾಸುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ಕಾಯಿಲೆ ಬಂದರೆ ರಾಸುಗಳು ಮೇವು ಸೇವನೆ ಮಾಡುವುದಿಲ್ಲ. ಒಂದೇ ಸಮನೆ ಏಳುವುದು, ಮಲಗುವುದು, ಅರಚುವುದು, ಮಾಡುತ್ತವೆ. ಇದರಿಂದ ಯಾವ ಸಂಧರ್ಭದಲ್ಲಿ ಏನು ಸಂಭವಿಸುತ್ತದೋ ಎನ್ನುವ ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. 12ನೇ ಸುತ್ತಿನ ಲಸಿಕೆ ಹಾಕಲು ಪ್ರಾರಂಭ ಮಾಡಬೇಕಾಗಿದ್ದ ಪಶುವೈದ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ವಿವಿಧ ಬೇಡಿಕೆ ಮುಂದಿಟ್ಟು ಲಸಿಕೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಇದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 21 ಕೇಂದ್ರಗಳ ಪೈಕಿ 1 ಪಾಲಿಕ್ಲಿನಿಕ್, 2 ಪಶು ಆಸ್ಪತ್ರೆಗಳು, 6 ಪಶುಚಿಕಿತ್ಸಾ ಕೇಂದ್ರಗಳು, 12 ಪ್ರಾಥಮಿಕ ಚಿಕಿತ್ಸಾಲಯಗಳಲ್ಲಿ ಬಿ.ವಿ.ಎಸ್.ಸಿಯ 10 ಮಂದಿ ವೈದ್ಯರು, ಅರೆತಾಂತ್ರಿಕ ಸಿಬ್ಬಂದಿ,  ಸುಮಾರು 20 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಇದುವರೆಗೂ ಬಡ್ತಿ ಸೌಲಭ್ಯ ಕಲ್ಪಿಸಿಲ್ಲ.
ಇದನ್ನು ಖಂಡಿಸಿ, ವಿವಿಧ ಬೇಡಿಕೆ ಮುಂದಿಟ್ಟು ಲಸಿಕೆ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗಿದೆ.

ADVERTISEMENT

ಲಸಿಕೆ ಹಾಕಿಸಲು ಮನವಿ: ಕಾಲುಬಾಯಿ ಜ್ವರ  ನಿಯಂತ್ರಣಕ್ಕೆ ಲಸಿಕೆ ಹಾಕಿಸುವ ವಿಚಾರದಲ್ಲಿ ರೈತರಲ್ಲಿ ಕೆಲ ಅಪನಂಬಿಕೆಗಳಿವೆ. ಲಸಿಕೆ ಹಾಕಿದ ಜಾನುವಾರುಗಳು ಕಡಿಮೆ ಹಾಲು ಉತ್ಪಾದನೆ ಮಾಡು­ತ್ತವೆ ಎಂಬ ತಪ್ಪು ತಿಳಿವಳಿಕೆ ರೈತರಲ್ಲಿದೆ ಎಂದು ಪಶು ಇಲಾಖೆ ಎಂದು ಸಹಾಯಕ ನಿರ್ದೇಶಕ ಜಗನ್ನಾಥ್ ತಿಳಿಸಿದ್ದಾರೆ.

‘ಲಸಿಕೆ ಹಾಕಿದ ಮೂರು–ನಾಲ್ಕು ದಿನ ಶೇ 20ರಷ್ಟು ಕಡಿಮೆ ಹಾಲನ್ನು ಹಸುಗಳು ನೀಡುತ್ತವೆ. ಆದರೆ ನಂತರದಲ್ಲಿ ಅವು ಮಾಮೂಲಿನಂತೆ ಹಾಲು ನೀಡುತ್ತವೆ.
ಗರ್ಭ ಧರಿಸಿದ್ದ ಹಸುವಿಗೆ ಲಸಿಕೆ ಹಾಕಿಸಿದರೆ ಗರ್ಭಪಾತ ಆಗುತ್ತದೆ ಎಂಬುದು ರೈತರಲ್ಲಿ ಇರುವ ಇನ್ನೊಂದು ಅಪನಂಬಿಕೆ. ಇದನ್ನು ಹೋಗಲಾಡಿಸಲು ಹಲವು ರೀತಿಯಲ್ಲಿ ಜಾಗೃತಿ ಕಾರ್ಯ ಕ್ರಮಗಳನ್ನು ಮಾಡಲಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.