ADVERTISEMENT

‘ಜೆಡಿಎಸ್‌ಗೆ ಮತದಾರರ ಒಲವು’

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:56 IST
Last Updated 28 ಜನವರಿ 2017, 10:56 IST
‘ಜೆಡಿಎಸ್‌ಗೆ ಮತದಾರರ ಒಲವು’
‘ಜೆಡಿಎಸ್‌ಗೆ ಮತದಾರರ ಒಲವು’   

ದೊಡ್ಡಬಳ್ಳಾಪುರ: ಜೆಡಿಎಸ್‌ ಪಕ್ಷದ ಕಡೆಗೆ ಕ್ಷೇತ್ರದಲ್ಲಿ ಕಾರ್ಯಕರ್ತರ ಹಾಗೂ ಮತದಾರರ ಒಲವು ಇದೆ. ಹೀಗಾಗಿಯೇ ತಾಲ್ಲೂಕು ಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ ಜೆಡಿಎಸ್‌ ಬೆಂಬಲಿತ ಹೆಚ್ಚು ಅಭ್ಯರ್ಥಿಗಳು  ಜಯಗಳಿಸಲು ಸಾಧ್ಯವಾಗಿದೆ ಎಂದು ಜೆಡಿಎಸ್‌ ಹಿರಿಯ ಮುಖಂಡ ವೆಂಕಟರಮಣಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಜೆಡಿಎಸ್‌ ಪಕ್ಷದಿಂದ ಎಪಿಎಂಸಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಪಿಎಂಸಿ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸಬೇಕಾಗಿತ್ತು. ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು. ಇದರಿಂದ ತಾಲ್ಲೂಕಿನ ಕಾರ್ಯಕರ್ತರಲ್ಲಿ ಗೊಂದಲಮೂಡಲು ದಾರಿಯಾಗುತ್ತಿದೆ ಎಂದರು.

ಎಪಿಎಂಸಿ ನೂತನ ಸದಸ್ಯರಾದ ಬಿ.ವಿ. ಲೋಕೇಶ್‌, ಕೆ.ಸಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ನಂಬಿಕೆ ಹಾಗೂ ಎಲ್ಲ ಮುಖಂಡರ ಬೆಂಬಲದಿಂದ ಅತಿ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಿದೆ. ಎಲ್ಲರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಲಾಗುವುದು. ಎಪಿಎಂಸಿಯಲ್ಲಿ ತರಕಾರಿ ಮಾರುಕಟ್ಟೆ ಜೊತೆಗೆ ಕೋಳಿ, ಕುರಿ ಮಾರಾಟವನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.

ದೊಡ್ಡಬೆಳವಂಗಲ ಹೋಬಳಿ ಜೆಡಿಎಸ್‌ ಮುಖಂಡ ಸಿ.ರಾಮಕೃಷ್ಣ ಮಾತನಾಡಿ, ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು ಎಂದು ಹೇಳಿದರು. ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಡಾ.ಎಚ್‌.ಜಿ. ವಿಜಯ್‌ಕುಮಾರ್‌ ಮಾತನಾಡಿ, ಪಕ್ಷದ ಎಲ್ಲ ಮುಖಂಡರ ಹಾಗೂ ಕಾರ್ಯಕರ್ತರ ಶ್ರಮದಿಂದ ತಾಲ್ಲೂಕಿನಲ್ಲಿ ಜೆಡಿಎಸ್‌ ಇತರೆ ಪಕ್ಷಗಳಿಗಿಂತಲು ಪಬಲವಾಗಿದೆ ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯಣ್ಣ ವಹಿಸಿದ್ದರು. ನಗರಸಭೆ ಸದಸ್ಯ ಪ್ರಭುದೇವ್‌,ಜೆಡಿಎಸ್‌ ಮುಖಂಡರಾದ ಎ.ನರಸಿಂಹಯ್ಯ, ವೆಂಕಟಪ್ಪ, ಮುನಿಯಪ್ಪ, ಪದ್ಮನಾಭ್‌, ತಳವಾರ್‌ ನಾಗರಾಜ್‌, ಮುನಿಯಪ್ಪ, ಎಸ್‌.ವಿ.ಚರಣ್‌ರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.