ADVERTISEMENT

‘ತಂಬಾಕು ಮನುಷ್ಯನನ್ನು ಕೊಲ್ಲುವ ರಕ್ಕಸ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:46 IST
Last Updated 27 ಮೇ 2017, 9:46 IST

ದೇವನಹಳ್ಳಿ: ಶರೀರದಲ್ಲಿರುವ ಪ್ರತಿಯೊಂದು ಅಂಗಾಂಗಗಳನ್ನು ವೈಫಲ್ಯಗೊಳಿಸುವ ತಂಬಾಕು ಮನುಷ್ಯನನ್ನು ನಿಧಾನವಾಗಿ ಕೊಲ್ಲುವ ರಕ್ಕಸ ಎಂದು ಜಿಲ್ಲಾ ತಂಬಾಕು ನಿಯಂತ್ರಣಾ ಅಧಿಕಾರಿ ಧರ್ಮೇಂದ್ರ ತಿಳಿಸಿದರು.

ಇಲ್ಲಿನ ತಾಲ್ಲೂಕು ಆರೋಗ್ಯ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಇಲಾಖೆ ಸಹಯೋಗದಲ್ಲಿ ನಡೆದ 2003ರ ಕೋಟ್ಪಾ ಕಾಯ್ದೆ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿಗರೇಟು, ಬೀಡಿ, ಗುಟ್ಕಾ, ಜರ್ದಾ ಮತ್ತಿತರ ತಂಬಾಕು ಉತ್ಪನ್ನಗಳ ಸೇವೆನೆಯಿಂದ ಸಮಾಜದಲ್ಲಿ ಜನಾರೋಗ್ಯದ ಬಹುದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲಿ ಪ್ರತಿವರ್ಷ ಹತ್ತು ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಪ್ರತಿಸೆಕೆಂಡಿಗೆ ಒಂದು ಸಾವು ಎಂದರೆ ಅತಂಕದ ವಿಷಯ ಎಂದರು.

ADVERTISEMENT

ಧೂಮಪಾನ ಮಾಡುವುದರಿಂದ ಶ್ವಾಸಕೋಶದ ತೊಂದರೆ, ದೈಹಿಕ ಸಾಮರ್ಥ್ಯ ಕ್ಷೀಣ, ಗರ್ಭಪಾತ, ಕ್ಷಯ, ಎದೆಯ ಸೊಂಕು, ಗರ್ಭಿಣಿಯರಿಗೆ ನಿರ್ಜೀವ ಶಿಶು ಜನನ, ಗರ್ಭಕಂಠದ ಕ್ಯಾನ್ಸರ್ ಬರಲಿದೆ. ಅಪಾಯ ಬರುವುದಕ್ಕಿಂತ ಮೊದಲು ಜಾಗೃತರಾಗಬೇಕು ಎಂದರು.

ರಾಜ್ಯ ತಂಬಾಕು ನಿಯಂತ್ರಣ ಮಂಡಳಿ ಸಂಯೋಜಕ ಹನುಮಂತರಾವ್  ಮಾತನಾಡಿ, ದೇಶದ ಪ್ರಗತಿಗೆ ಮಾರಕವಾಗಿರುವ ಸಾಂಕ್ರಾಮಿಕ ರೋಗ ಮತ್ತು ಕೆಟ್ಟ ಚಟಗಳು ಮುಕ್ತವಾಗಬೇಕಾದರೆ ಶಿಕ್ಷಣ ಇಲಾಖೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅತಿಹೆಚ್ಚು ಜವಬ್ದಾರಿಯಿಂದ ಕಾನೂನು ಕ್ರಮ ಕೈಗೊಳ್ಳಬೇಕು, ಶಾಲಾ ಕಾಲೇಜುಗಳಲ್ಲಿ ಮಾರಕ ಚಟದ ಬಗ್ಗೆ ಅರಿವು ಕಾರ್ಯಗಾರ ಶಿಬಿರ ನಡೆಸಬೇಕು ಎಂದರು.

ತಂಬಾಕು ಉತ್ಪನ್ನ ಮಾರಾಟ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಕೊಟ್ಟಾ ಕಾಯ್ದೆಯ ಎಲ್ಲಾ ನಿಯಮ ಮತ್ತು ಉಪ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಮಾತ್ರ ಕಡಿವಾಣ ಹಾಕಲು ಸಾಧ್ಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು ಮಾತನಾಡಿದರು. ಕಂದಾಯ ಇಲಾಖೆ ಶಿರಸ್ತೇದಾರ್ ರಾಘವೇಂದ್ರ, ತಾಲ್ಲುಕು ಆರೋಗ್ಯಧಿಕಾರಿ ರಶ್ಮಿ ಉಪಸ್ಥಿತರಿದ್ದರು.

* * 

ಕ್ಯಾನ್ಸರ್, ಬಲಹೀನತೆ, ಉದರದಲ್ಲಿ ಹುಣ್ಣು ,ಹಲ್ಲುಗಳ ಹುಳುಕು, ದೃಷ್ಟಿಮಾಂಧ್ಯತೆ, ಕೂದಲು ಉದುರುವಿಕೆ, ವಿಕೃತ ವೀರ್ಯಾಣು, ಗ್ಯಾಂಗ್ರಿನ್ ರೋಗಗಳಿಗೆ ತಂಬಾಕು ಸೇವನೆ ಮುಖ್ಯ ಕಾರಣವಾಗಿದೆ
ಧರ್ಮೇಂದ್ರ ,  ಜಿಲ್ಲಾ ತಂಬಾಕು ನಿಯಂತ್ರಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.