ADVERTISEMENT

ತಮಿಳುನಾಡಿಗೆ ಹರಿಯುತ್ತಿರುವ ನೀರು

ಕಿತ್ತು ಹೋಗಿರುವ ಅತ್ತಿಬೆಲೆ–ಜೂಜುವಾಡಿ ಕೆರೆ ಕಟ್ಟೆ ಕೋಡಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 9:10 IST
Last Updated 29 ಜುಲೈ 2016, 9:10 IST
ಅತ್ತಿಬೆಲೆ–ಜೂಜುವಾಡಿ ಕೆರೆಯ ಕಟ್ಟೆಯ ಕೋಡಿಯು ಕಿತ್ತು ಹೋಗಿರುವುದರಿಂದ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ತಮಿಳುನಾಡಿಗೆ ಹರಿದು ಹೋಗುತ್ತಿರುವ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಕೆರೆಯ ನೋಟ
ಅತ್ತಿಬೆಲೆ–ಜೂಜುವಾಡಿ ಕೆರೆಯ ಕಟ್ಟೆಯ ಕೋಡಿಯು ಕಿತ್ತು ಹೋಗಿರುವುದರಿಂದ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ತಮಿಳುನಾಡಿಗೆ ಹರಿದು ಹೋಗುತ್ತಿರುವ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಕೆರೆಯ ನೋಟ   

ಆನೇಕಲ್‌: ಅತ್ತಿಬೆಲೆ–ಜೂಜುವಾಡಿ ಕೆರೆಯ ಕಟ್ಟೆಯ ಕೋಡಿಯು ಕಿತ್ತು ಹೋಗಿರುವುದರಿಂದ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ನೀರು ವ್ಯರ್ಥವಾಗದಂತೆ ಕೋಡಿಯನ್ನು ದುರಸ್ಥಿ ಮಾಡಬೇಕು ಎಂದು ಅತ್ತಿಬೆಲೆ ಪುರಸಭಾ ಸದಸ್ಯ ಪಿ.ನಾರಾಯಣಸ್ವಾಮಿ ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಒತ್ತಾಯಿಸಿದರು.

ರಾಜ್ಯದ ಗಡಿ ಭಾಗದ ಆನೇಕಲ್ ತಾಲ್ಲೂಕಿನ  ಅತ್ತಿಬೆಲೆ ಮತ್ತು ತಮಿಳುನಾಡಿನ ಜೂಜವಾಡಿ ಗ್ರಾಮಗಳ ವ್ಯಾಪ್ತಿಯ ಸರ್ವೆ ನಂಬರುಗಳಿಗೆ ಒಳ ಪಡುವ ಈ ಕೆರೆಯು 120 ಎಕರೆಗೂ ಹೆಚ್ಚಿನ ವಿಸ್ತಾರವಾಗಿದ್ದು  ಈ ಭಾಗದ ಜನರ ನೀರಿನ ದಾಹವನ್ನು ನೀಗಿಸುವ ಮೂಲವಾಗಿದೆ.

ರಾಜ್ಯದ ಅತ್ತಿಬೆಲೆ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 80 ಎಕರೆಗೂ ಹೆಚ್ಚು ವಿಸ್ತಾರವನ್ನು ಹೊಂದಿದ್ದರೆ ನೆರೆಯ ತಮಿಳುನಾಡಿನ ಜೂಜವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 40 ಎಕರೆಯಷ್ಷು ಹೆಚ್ಚಿನ   ವಿಸ್ತಾರ ಹೊಂದಿದೆ. ಆದರೆ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆ ಕೆರೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿ ಸಿದರು.   

ಗ್ರಾಂ.ಪಂ.ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ ಈಗಾಗಲೇ ಅತ್ತಿಬೆಲೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು 1200 ರಿಂದ 1500 ಅಡಿಗಳವರೆಗೂ ಬೋರ್‌ವೆಲ್ ಕೊರೆಸಿದರು ಸಹ ನೀರು ಸಿಗುವುದಿಲ್ಲ, ಸಿಕ್ಕರೂ ಕೆಲವೆ ತಿಂಗಳುಗಳಲ್ಲಿ ನೀರು ಬತ್ತಿಹೊಗುತ್ತದೆ. ಮೂರನಾಲ್ಕು ವರ್ಷಗಳಿಂದ ನೆರೆಯ ಗ್ರಾಮಗಳಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಸರಬರಾಜು ಮಾಡಲಾಗುತ್ತಿದೆ. ಅತ್ತಿಬೆಲೆ ಕೆರೆಯಲ್ಲಿ ನೀರು ಸಂಗ್ರಹ ವಾಗಿರುವುದರಿಂದ ಬೋರ್‌ವೆಲ್‌ಗಳಲ್ಲಿ ನೀರು ಲಭ್ಯವಾಗುತ್ತಿದೆ.

ಅಂತರ್ಜಲ ಹೆಚ್ಚಾಗಿದೆ. ಹಾಗಾಗಿ ಕೆರೆ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು. ಸುತ್ತಲೂ ಬೇಲಿ ಹಾಕಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. 
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೆರೆಯ ಸಂರಕ್ಷಣೆಗಾಗಿ ಬೇಲಿ ಹಾಕಿಸುವ ಬಗ್ಗೆ ಹಾಗೂ ಒಡೆದು ಹೋಗಿರುವ ಕೋಡಿಯನ್ನು ದುರಸ್ಥಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.