ADVERTISEMENT

ದೇವನಹಳ್ಳಿ: ಎಂಟು ಪಶುಗಳು ಬಲಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 10:31 IST
Last Updated 6 ಏಪ್ರಿಲ್ 2017, 10:31 IST

ದೇವನಹಳ್ಳಿ: ಕಳೆದ ಹದಿನೈದು ದಿನಗಳಲ್ಲಿ ಎಂಟು ಪಶುಗಳು ಮರಣ ಹೊಂದಿದ್ದು ಕಾಲು ಬಾಯಿ ಜ್ವರವೊ ಅಂಥ್ರಾಕ್ಸ್ ರೋಗವೊ ಎಂಬ ಅನುಮಾನ ಪಟ್ಟಣದ ನೀಲೇರಿ ಬಡಾವಣೆಯಲ್ಲಿ ಪಶು ಪಾಲಕರನ್ನು ಕಾಡುತ್ತಿದೆ.

ಕಳೆದ ಎಂಟು ದಿನಗಳಿಂದ 20 ಕ್ಕೂ ಹೆಚ್ಚು ಪಶುಗಳು ಮೇವು ನೀರು ತ್ಯಜಿಸಿ ನಿತ್ರಾಣ ಸ್ಥಿತಿಯಲ್ಲಿ ನೋವು ಅನುಭವಿಸುತ್ತಿದ್ದು ಪಶು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.

ಯಾವುದೇ ಚಿಕಿತ್ಸೆಗೆ ಈ ಪಶುಗಳು ಸ್ಪಂದಿಸುತ್ತಿಲ್ಲ, ಸಾಲ ಮಾಡಿ ಖರೀದಿಸಿದ ಪಶುಗಳ ದಾರುಣ ಸ್ಥಿತಿಯಲ್ಲಿರುವುದನ್ನು ಕಂಡು ಪಾಲಕರು ಗೋಳು ತೋಡಿಕೊಂಡಿದ್ದಾರೆ.

ADVERTISEMENT

ಪಶುಪಾಲಕ ಗೊವಿಂದರಾಜು ಮಾತನಾಡಿ, ಇದೊಂದು ವಿಚಿತ್ರ ಮಾರಣಾಂತಿಕ ರೋಗವಾಗಿದೆ, ಪಶುಗಳು ಯಾವುದೇ ರೋಗ ಬಂದರೂ ದೇಹದ ಚಲನ ವಲನ ಸೇವಿಸುವ ಅಹಾರ ಪ್ರಮಾಣದ ಮೇಲೆ ರೋಗದ ಲಕ್ಷಣ ಗುರುತಿಸುತ್ತಿವೆ. ಪ್ರಸ್ತುತ ಈ ರೋಗ ಹಠಾತ್ತನೆ  ನೀರು ಮೇವು ಬಿಟ್ಟು ನರಳಾಡುವುದು, ಏಳುವುದು ,ಮಲಗುವುದು, ಅರಚುವುದು ಮಾಡುತ್ತವೆ. ಸಾಲ ಮಾಡಿ ಖರೀದಿಸಿದ ಪಶುಗಳು ಇವು, ಇನ್ನು ಸಾಲ ತೀರಿಸುವುದಾದರೂ ಹೇಗೆ ಎಂಬ ಗೊಂದಲದಲ್ಲಿ ರೈತಾಪಿ ವರ್ಗವಿದೆ ಎಂದರು.

ಪಶು ವಿಮೆ ಮಾಡಿಸಿದರೂ ಶೇ 40 ರಿಂದ 50 ರಷ್ಟು ಮಾತ್ರ ನೀಡಲು ಸಾಧ್ಯ ಮಣ್ಣು ಮಾಡಲು ಹಣವಿಲ್ಲ , ಸಮೀಪದ ನೀಲಗಿರಿ ತೋಪಿನಲ್ಲಿ ಇವುಗಳನ್ನು ಎಸೆಯಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪರಿಹಾರ ಸಿಗುತ್ತಿಲ್ಲ, ಪಶುಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ ಸಾಮೂಹಿಕ  ಪಶುಗಳ ಮಾರಣ ಹೋಮವಾದರೆ ಪರಿಸ್ಥಿತಿ ಬಹಳ ಕಷ್ಟಕರ ಎಂದು ವಿವರಿಸಿದರು.

ರೈತ ನಾರಾಯಣ ಸ್ವಾಮಿ ಮಾತನಾಡಿ, ‘ಕಳೆದ 15 ದಿನಗಳಿಂದ ಪಶುಗಳು ಸಾವನ್ನಪ್ಪುತ್ತಿವೆ, ಯಾವ ವೈದ್ಯರೂ ಬಂದಿರಲಿಲ್ಲ, ಇವತ್ತು ಬೆಂಗಳೂರು ಮತ್ತು ತಾಲ್ಲೂಕಿನ ಪಶು ವೈದ್ಯರು ಪರಿಶೀಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಪಶು ಪಾಲನೆಯನ್ನೇ ನಂಬಿರುವ ಪಾಲಕರಿಗೆ ಸೂಕ್ತ ಚಿಕಿತ್ಸೆ ನೀಡಿ ಧೈರ್ಯ ತುಂಬುವ ಕೆಲಸ ವೈದ್ಯರು ಮಾಡಬೇಕು’ ಎಂದು ಅಗ್ರಹಿಸಿದರು.

ನೀಲೇರಿ ಬಡಾವಣೆಯಲ್ಲಿ ಪಶುಗಳಿಗೆ ಆವರಿಸಿರುವ ವಿಚಿತ್ರ ರೋಗಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಜೈವಿಕ ಮತ್ತು ಆರೋಗ್ಯ ಸಂಸ್ಥೆ ವಿಜ್ಞಾನಿಗಳ ತಂಡ ಸಾವನ್ನಪ್ಪಿದ ಪಶುಗಳ ಅಂಗಾಂಗ ಮತ್ತು ನಿತ್ರಾಣಗೊಂಡಿರುವ ಪಶುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೋಗದ ಲಕ್ಷಣ ಬಹುತೇಕ ಕಾಲು ಬಾಯಿ ಜ್ವರದಿಂದ ಸಾವನ್ನಪ್ಪಿರುವುದು ಶಂಕೆ ವ್ಯಕ್ತವಾಗುತ್ತಿದೆ. ಪಶುಪಾಲಕರು ರೋಗ ಆರಂಭದಲ್ಲಿ ನಮ್ಮ ಗಮನಕ್ಕೆ ತಂದಿಲ್ಲ, ಖಾಸಗಿಯಾಗಿ ಚಿಕಿತ್ಸೆ ಕೊಡಿಸಿದ್ದಾರೆ ರೋಗ ಉಲ್ಬಣಿಸಿದಾಗ ನಮಗೆ ಮಾಹಿತಿ ದೂರಕಿದೆ ಎಂಬುದಾಗಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೆಶಕ ಜಗನ್ನಾಥ್ ತಿಳಿಸಿದರು.

‘ಬಮುಲ್’ ನಿರ್ದೆಶಕ ಜಿ. ಶ್ರೀನಿವಾಸ್, ಮಾತನಾಡಿ, ಒಂದೊಂದು ಪಶುವಿನ ಬೆಲೆ ₹ 60 ಸಾವಿರದಿಂದ ₹ 1.25 ಲಕ್ಷದ ವರೆಗೆ  ಇದೆ. ಶಿಬಿರ ಕಚೇರಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮಾರಕ ರೋಗಗಳ ಮುಂಜಾಗ್ರತೆ ಬಗ್ಗೆ ಕಾರ್ಯಾಗಾರ ನಡೆಸಿ ರೋಗ ಲಕ್ಷಣದ ಬಗ್ಗೆ ತಿಳಿಸಿ ತಕ್ಷಣ ಪಶು ವೈದ್ಯರ ಗಮನಕ್ಕೆ ತರಬೇಕು ಎಂದು ತಿಳಿಸಿದರೂ ನಿರ್ಲಕ್ಷ್ಯವಹಿಸಿದರೆ ಯಾರು ಜವಾಬ್ದಾರರು ಎಂದರು.

**

ಒಂದು ಮನೆಯಲ್ಲಿ ನಾಲ್ಕು ಹಸು ಇದ್ದರೆ ಎರಡಕ್ಕೆ ಮಾತ್ರ ವಿಮೆ ಮಾಡಿಸುತ್ತಾರೆ, ಬೇರೆ ರಾಜ್ಯ ಮತ್ತು ಜಿಲ್ಲೆ ತಾಲ್ಲೂಕುಗಳಿಂದ ಹಸು ಖರೀದಿಸಿದ ತಕ್ಷಣ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಿಸಬೇಕು.
–ಜಿ. ಶ್ರೀನಿವಾಸ್, ‘ಬಮುಲ್’ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.