ADVERTISEMENT

ದೇವನಹಳ್ಳಿ: 50 ಸಾವಿರ ಸಸಿ ನೆಡುವ ಗುರಿ

ಸರ್ಕಾರಿ ಭೂಮಿ, ರಸ್ತೆ ಬದಿ ಹಸಿರೀಕರಣ: ವಿವಿಧ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಯಿಂದ ಯೋಜನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 7:28 IST
Last Updated 3 ಜುಲೈ 2015, 7:28 IST

ದೇವನಹಳ್ಳಿ: ತಾಲ್ಲೂಕಿನ ಸರ್ಕಾರಿ ಭೂಮಿ, ಖರಾಬು ರಸ್ತೆ ಬದಿ, ಶಾಲಾ ಅಂಗಳ ಸೇರಿದಂತೆ ವಿವಿಧೆಡೆ ಪರಿಸರ ಹಸಿರೀಕರಣಗೊಳಿಸಲು 50ಸಾವಿರ ಸಸಿ ನೆಡುವ ಗುರಿ ಇದೆ ಎಂದು ತಾಲ್ಲೂಕು ಸೇವಾ ದಳ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಿನಾರಾಯಣ ತಿಳಿಸಿದರು.

ಪಟ್ಟಣದ ಚಿಕ್ಕಕೆರೆ ಬೈಪಾಸ್ ರಸ್ತೆ ಬದಿಯಲ್ಲಿ ಪುರಸಭೆ, ಲಯನ್ ಸಂಸ್ಥೆ, ಭಾರತ ಸೇವಾದಲ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್ ಮತ್ತು ಅರಣ್ಯ ಇಲಾಖೆ ಸಹ ಯೋಗದಲ್ಲಿ ನಡೆದ ನೆಟ್ಟ ಗಿಡಗಳ ಪರಿಶೀಲನೆ ಮತ್ತು ನೂತನ ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ 75 ಸಾವಿರ ಸಸಿಯನ್ನು ನೆಡಲಾಗಿದೆ. ಇದರಲ್ಲಿ ಶೇಕಡ 70ರಷ್ಟು ಸಸಿಗಳು ಬೆಳವಣಿಗೆ ಹಂತದಲ್ಲಿವೆ. ಸಸಿ ರಕ್ಷಣೆ ಮತ್ತು ನೀರಿಲ್ಲದೆ ಒಣಗಿರುವ ಜಾಗದಲ್ಲಿ ಮತ್ತೆ ಸಸಿ ನೆಡಬೇಕಾಗಿದೆ ಹಾಕಿದ ಪ್ರತಿಯೊಂದು ಸಸಿ ಬೆಳೆಯಬೇಕು ಎಂಬ ಸದುದ್ದೇಶ ನಮ್ಮದು ಇದಕ್ಕೆ ಪೂರಕವಾಗಿ ಸಂಘ ಸಂಸ್ಥೆಗಳು ಸಂಬಂಧಿಸಿದ ಇಲಾಖೆ ಸಹಕರಿಸುತ್ತಿವೆ. ಆದರೆ, ಸ್ಥಳೀಯರು ಸಸಿ ರಕ್ಷಣೆಗೆ ಸಹಕರಿಸಬೇಕೆಂದರು.

ಶಿಕ್ಷಕರು ಮಕ್ಕಳಿಗೆ ಪರಿಸರದ ಬಗ್ಗೆ ಬೋಧನೆ ಮಾಡುವ ಬದಲು ಕನಿಷ್ಠ ವಾರಕ್ಕೊಮ್ಮೆ ಸಸಿ ನೆಟ್ಟಿರುವ ಕಡೆ ಕರೆತಂದು ಗಿಡದ ಬೆಳವಣಿಗೆ, ಗಿಡದ ಪ್ರಬೇಧ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ಮನವರಿಕೆ ಮಾಡಬೇಕು. ಅದೇರೀತಿ ಪ್ರಾದೇಶಿಕ ತಳಿಯ ಸಸಿಗಳಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದಾಗ ಮಕ್ಕಳು ಕ್ರಿಯಾಶೀಲಾರಾಗಿ ಪರಿಸರದ ಬಗ್ಗೆ ಕಾಳಜಿವಹಿಸುತ್ತಾರೆ ಎಂದು ತಿಳಿಸಿದರು.

ಖಾಲಿ ಜಾಗದಲ್ಲಿ ಸಸಿಗಳನ್ನು ನೆಡುವಂತೆ ವಿದ್ಯಾರ್ಥಿಗಳನ್ನು ಪ್ರೇರಿಪಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಸಸಿನೆಡುವುದು ಸುಲಭ ಅದರೂ ಅದನ್ನು ಮೂರು, ನಾಲ್ಕು ವರ್ಷ ನೀರು ನೀಡಿ ರಕ್ಷಣೆ ನೀಡಿದರೆ ಮುಂದಿನ ಹಂತದ ಬೆಳವಣಿಗೆ ಸರಾಗವಾಗಿ ಅಗಲಿದೆ ಎಂದರು.

ಸೇವಾದಳ ಕಾರ್ಯದರ್ಶಿ ಶಿವರಾಮಯ್ಯ ಮಾತನಾಡಿ ತಾಲ್ಲೂಕಿನಾದ್ಯಂತ ಅನೇಕ ಶಾಲೆಗಳಿವೆ, ಶಾಲೆಯ ಅಂಗಳದಲ್ಲಿ ಸಸಿ ನೇಡಲಾಗಿದೆ, ಮಧ್ಯಾಹ್ನದ ಬಿಸಿಯೂಟದ ನಂತರ ಒಂದು ಸಸಿ ಇರುವ ಸ್ಥಳದಲ್ಲಿ ಕನಿಷ್ಠ ಐದಾರು ವಿದ್ಯಾರ್ಥಿಗಳು ಕೈತೊಳೆದರೂ ಸಸಿ ಬೆಳವಣಿಗೆಗೆ ಪೂರಕ ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಅಧ್ಯಕ್ಷ ವೆಂಕಟೇಶ, ನಿರ್ದೇಶಕ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಹಾಜರಿದ್ದರು.

ಪುರಸಭೆ ವ್ಯಾಪ್ತಿಯಲ್ಲಿರುವ ಮೂರು ಸಾವಿರ ಸಸಿಗಳಿಗೆ ಲಯನ್ ಸಂಸ್ಥೆ ವತಿಯಿಂದ ನೀರುಣಿಸಲಾಗುತ್ತಿದೆ.
-ವಿ. ಗೋಪಾಲ್
, ಲಯನ್ಸ್‌ ಕ್ಲಬ್‌ ಅಧ್ಯಕ್ಷ

ಶಿಕ್ಷಕರು ಕೇವಲ ಪರಿಸರದ ಬಗ್ಗೆ ಬೋಧನೆ ಮಾಡುವ ಬದಲು ಕನಿಷ್ಠ ವಾರಕ್ಕೊಮ್ಮೆ ಮಕ್ಕಳಿಗೆ ಸಸಿಗಳ ಬೆಳವಣಿಗೆ,  ಪ್ರಬೇಧ ಮತ್ತು ಪ್ರಯೋಜನಗಳ ಮನವರಿಕೆ ಮಾಡಬೇಕು.
-ಎಸ್. ಲಕ್ಷ್ಮಿನಾರಾಯಣ,
 ತಾಲ್ಲೂಕು ಸೇವಾದಳ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.