ADVERTISEMENT

ದ್ಯಾವಸಂದ್ರದಲ್ಲಿ ರಸ್ತೆ ತಡೆ: ಲಾಠಿ ಪ್ರಹಾರ

ರೈತನ ಸಾವು ಪ್ರಕರಣದಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ: ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 9:19 IST
Last Updated 6 ಅಕ್ಟೋಬರ್ 2015, 9:19 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದ್ಯಾವಸಂದ್ರ ಗ್ರಾಮದ ರಸ್ತೆ ಬದಿಯಲ್ಲಿ ಗುಂಡಿಗೆ ಉರುಳಿ ಬಿದ್ದಿರುವ ಕಸದ ಲಾರಿ
ದೊಡ್ಡಬಳ್ಳಾಪುರ ತಾಲ್ಲೂಕಿನ ದ್ಯಾವಸಂದ್ರ ಗ್ರಾಮದ ರಸ್ತೆ ಬದಿಯಲ್ಲಿ ಗುಂಡಿಗೆ ಉರುಳಿ ಬಿದ್ದಿರುವ ಕಸದ ಲಾರಿ   

ದೊಡ್ಡಬಳ್ಳಾಪುರ: ರೈತರೊಬ್ಬರ ಸಾವಿನ ಪ್ರಕರಣದಿಂದ ರೊಚ್ಚಿಗೆದ್ದು ರಸ್ತೆ ತಡೆ ನಡೆಸುತ್ತಿದ್ದ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ ಪ್ರಸಂಗ ತಾಲ್ಲೂಕಿನ ದ್ಯಾವಸಂದ್ರದಲ್ಲಿ ಸೋಮವಾರ ಸಂಜೆ ನಡೆಯಿತು.

ತಾಲ್ಲೂಕಿನ ಚಿಗೇರನಹಳ್ಳಿ ಸಮೀಪದ ಎಂಎಸ್‌ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕ್ಕೆ ಕಸ ಸುರಿದು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ರೈತ ಮೃತ್ಯುಂಜಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ಅಡ್ಡವಾಗಿಟ್ಟು ಧರಣಿಗೆ ಮುಂದಾಗಿದ್ದರಿಂದ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಗಳ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವು ಗ್ರಾಮಸ್ಥರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

ಪೊಲೀಸರ ಕ್ರಮದಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಂಧಿತರನ್ನು ಪೊಲೀಸ್‌ ವ್ಯಾನ್‌ನಿಂದ ಕೆಳಗಿಳಿಸುವಂತೆ ಆಗ್ರಹಿಸಿ ಮೃತರ ಅಂತ್ಯಕ್ರಿಯೆಗೆ ಬಂದಿದ್ದ ಮಹಿಳೆಯರು ಪೊಲೀಸ್‌ ವಾಹನಕ್ಕೆ ಅಡ್ಡಲಾಗಿ ಮಲಗಿ ತೀವ್ರ ಪ್ರತಿಭಟನೆಗೆ ಮುಂದಾದರು. ಇದರಿಂದ ಪೊಲೀಸರು ಹಾಗೂ ಮೃತರ ಸಂಬಂಧಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ತಕ್ಷಣ ಸ್ಥಳಕ್ಕೆ ಬಂದ ಶಾಸಕ ಟಿ. ವೆಂಕಟರಮಣಯ್ಯ ಅವರ ವಿರುದ್ಧವೂ ಮೃತರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಹಾಕಿದರು. ಪರಿಸ್ಥಿತಿಯನ್ನು ಶಾಂತಗೊಳಿಸಲು ಹರಸಾಹಸ ಪಟ್ಟ ಶಾಸಕರು, ಪೊಲೀಸರು ಬಂಧಿಸಿ ವ್ಯಾನಿನಲ್ಲಿ ಕೂರಿಸಿಕೊಂಡಿದ್ದವರನ್ನು ಬಿಡುಗಡೆಗೊಳಿಸಿ ಸಾರ್ವಜನಿಕರು ಹಾಗೂ ಮೃತ ರೈತನ ಸಂಬಂಧಿಕರನ್ನು ಸಮಾಧಾನಪಡಿಸಿದರು.

ರಸ್ತೆ ತಡೆಗೆ ಕಾರಣ: ಸೋಮವಾರ ಮಧ್ಯಾಹ್ನ 2 ಗಂಟೆಯಿಂದಲೂ ದ್ಯಾವಸಂದ್ರದ ಸಮೀಪ ತೋಟದ ಮನೆಯಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಎಂಜಿನಿಯರ್‌ ಪರಮೇಶ್ವರಪ್ಪ, ಮೃತರ ಸಂಬಂಧಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಸತತ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಮೃತರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ನೀಡುವಂತೆ  ಅಧಿಕಾರಿಗಳಿಂದ ಕರಾರು ಪತ್ರ ಬರೆಸಿದರು. 

ಸಭೆ ನಡೆಯುತ್ತಿದ್ದ ಸ್ಥಳಕ್ಕೂ  ಮೃತ ದೇಹ ಇದ್ದ ಸ್ಥಳಕ್ಕೂ ಸುಮಾರು ಅರ್ಧ ಕಿ.ಮೀ. ದೂರ ಇತ್ತು. ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಪರಿಹಾರ ನೀಡಲು ಒಪ್ಪುತ್ತಿಲ್ಲ ಎನ್ನುವ ಸುದ್ದಿಯಿಂದ ಕೆರಳಿದ ಗ್ರಾಮಸ್ಥರು ಹಾಗೂ ಅಂತ್ಯಕ್ರಿಯೆಗೆ ಬಂದಿದ್ದ ಸಂಬಂಧಿಕರು ಸಂಜೆ 5 ಗಂಟೆ ಸುಮಾರಿಗೆ ರಸ್ತೆ ಬದಿಯಲ್ಲಿದ್ದ  ಮೃತ ದೇಹವನ್ನು ತುಮಕೂರು–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಅಡ್ಡವಾಗಿಟ್ಟು ಪ್ರತಿಭಟನೆಗೆ ಮುಂದಾದರು. ಇದರಿಂದ ಪೊಲೀಸರು ಹಾಗೂ ಗ್ರಾಮಸ್ಥರ ಮಧ್ಯೆ ಜಟಾಪಟಿಗೆ ಕಾರಣವಾಯಿತು. ಶಾಸಕರ ಮಧ್ಯಸ್ಥಿಕೆ ಹಾಗೂ ಪೊಲೀಸ್‌ ಬಂದೋಬಸ್ತ್‌ನಲ್ಲಿ ಮೃತ ರೈತನ ಅಂತ್ಯಕ್ರಿಯೆ ನಡೆಯಿತು

ಹಿಂದಿನವರೇ ಕಾರಣ: ತಾಲ್ಲೂಕಿನಲ್ಲಿ  ಬಿಬಿಎಂಪಿ ಕಸ ವಿಲೇವಾರಿ ಘಟಕಗಳು ಸ್ಥಾಪನೆಯಾಗಲು  ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದವರೇ ಕಾರಣ. ಈಗ ತೊಂದರೆಯಾಗುತ್ತಿದೆ ಎಂದು ಕೂಗಾಡಿದರೆ ಏನು ಮಾಡುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಪ್ರಶ್ನಿಸಿದ್ದಾರೆ.

ಅವರು ತಾಲ್ಲೂಕಿನ ದ್ಯಾವಸಂದ್ರ ಗ್ರಾಮದ ರೈತ ಮೃತ್ಯುಂಜಯ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಚಿಗರೇನಹಳ್ಳಿ ಸಮೀಪ ಎಂಎಸ್‌ಜಿಪಿ ಘಟಕ ಸ್ಥಾಪನೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದಾಗ ಜನರು ಬೆಂಬಲ ನೀಡಲಿಲ್ಲ. ಆದರೂ ಸಹ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರನ್ನು ಇಲ್ಲಿಗೆ ಕರೆಸಿ ಕಸ ವಿಲೇವಾರಿ ಘಟಕಗಳ ಸುತ್ತಲಿನ ಗ್ರಾಮಗಳಿಗೆ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಇದಲ್ಲದೆ ಬೆಂಗಳೂರು ಸುತ್ತ ಹೊಸ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಘಟಕಗಳು ಕಾರ್ಯಾರಂಭವಾದ ನಂತರ ತಾಲ್ಲೂಕಿಗೆ ಕಸ ಬರುವುದು ಕಡಿಮೆಯಾಗಲಿದೆ. ಕಸದ ವಾಹನ ಡಿಕ್ಕಿ ಹೊಡೆದು ಮೃತ ಪಟ್ಟಿರುವ ರೈತನ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡುವಂತೆ ಬಿಬಿಎಂಪಿ ಅಧಿಕಾರಿಗಳನ್ನು ಒಪ್ಪಿಸಲಾಗಿದೆ ಎಂದರು. 

ಮಾಜಿ ಶಾಸಕರ ಸಾಂತ್ವನ: ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಮೃತ್ಯುಂಜಯ ಅವರ ಕುಟುಂಬದವರಿಗೆ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಸಾಂತ್ದನ ಹೇಳಿದರು. ಸೋಮವಾರ ಮೃತರ ಸಂಬಂಧಿಕರನ್ನು ಭೇಟಿ ಮಾಡಿ, ಬೆಂಗಳೂರಿನಿಂದ ಕಸ ತುಂಬಿದ ಲಾರಿಗಳು ಬರುವ  ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಬಿಬಿಎಂಪಿ ಮೇಯರ್‌ ಮಂಜುನಾಥರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

ಕಸದ ಲಾರಿ ಡಿಕ್ಕಿ: ರೈತ ಸಾವು
ದೊಡ್ಡಬಳ್ಳಾಪುರ:
ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿದ್ದ ಲಾರಿಯೊಂದು ಡಿಕ್ಕಿಯಾಗಿ ರೈತನೊಬ್ಬ ಮೃತಪಟ್ಟ ಘಟನೆ ಭಾನುವಾರ ರಾತ್ರಿ ದ್ಯಾವಸಂದ್ರದಲ್ಲಿ ನಡೆದಿದೆ.

ದ್ಯಾವಸಂದ್ರದಲ್ಲಿನ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಿ ಲಾರಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದ್ಯಾವಸಂದ್ರ ಗ್ರಾಮದ ರೈತ ಮೃತ್ಯುಂಜಯ್ಯ (55) ಮೃತಪಟ್ಟವರು. ತೀವ್ರ ಗಾಯಗೊಂಡಿದ್ದ ಮೃತ್ಯುಂಜಯ ಅವರನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

ತುಮಕೂರು–ದೊಡ್ಡಬಳ್ಳಾಪುರ ರಸ್ತೆ ಬದಿಯಲ್ಲಿರುವ ತೋಟದಲ್ಲಿನ ಕೆಲಸ ಮುಗಿಸಿಕೊಂಡು ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕಸ ತುಂಬಿಕೊಂಡು ಬರುವ ಲಾರಿ ಚಾಲಕರು ಕುಡಿದ ಅಮಲಿನಲ್ಲಿ ಲಾರಿಗಳನ್ನು ಚಲಾಯಿಸುತ್ತಾರೆ. ಇದರಿಂದಾಗಿಯೇ ಈ ಭಾಗದಲ್ಲಿ ಇತ್ತೀಚೆಗೆ ಅಪಘಾತಗಳು ಸಾಮಾನ್ಯವಾಗಿ ಎಂದು ಗ್ರಾಮಸ್ಥರು ದೂರಿದ್ದಾರೆ. ದೊಡ್ಡಬೆಳವಂಗಲ ಪೊಲೀಸರು ದೂರು ದಾಖಲಿಸಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT