ADVERTISEMENT

ನೀರಿನ ಮಿತಬಳಕೆಗೆ ಆದ್ಯತೆ ಕೊಡಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:07 IST
Last Updated 10 ಏಪ್ರಿಲ್ 2017, 6:07 IST

ವಿಜಯಪುರ: ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದಂತೆ ಕುಡಿಯುವ ನೀರಿನ ಬವಣೆಯು ತೀವ್ರಗೊಳ್ಳುತ್ತಿರುವುದರಿಂದ ನಾಗರಿಕರು ನೀರಿನ ಮಿತಬಳಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿಚಿನ್ನಪ್ಪ ಹೇಳಿದರು.

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮದಲ್ಲಿ ಕೊಳವೆಬಾವಿ ಕೊರೆಯಲು ಚಾಲನೆ ನೀಡಿ ಅವರು ಮಾತನಾಡಿದರು.
ತೀವ್ರ ಬರಗಾಲ ಕಾಡುತ್ತಿದ್ದು, ಒಂದೊಂದು ಹನಿ ನೀರಿಗೂ ತತ್ವಾರ ಉಂಟಾಗುತ್ತಿದೆ. ಟಾಸ್ಕ್ ಪೋರ್ಸ್ ಯೋಜನೆಯಡಿಯಲ್ಲಿ ಕೊಳವೆಬಾವಿ ಮಂಜೂರು ಮಾಡಲಾಗಿದ್ದು ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಳ್ಳಿಗಳಲ್ಲಿ ಹೆಚ್ಚಿನ ಸಹಕಾರ ನೀಡಿದಾಗ ಮಾತ್ರವೇ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ತೀವ್ರ ನೀರಿನ ಅಭಾವ ಕಾಡುತ್ತಿರುವ ಹಳ್ಳಿಗಳಲ್ಲಿ ಕೊಳವೆಬಾವಿಗಳು ವಿಫಲವಾದರೆ ಅಂತಹ ಹಳ್ಳಿಗಳಲ್ಲಿನ ರೈತರನ್ನು ಮನವೊಲಿಸಬೇಕು. ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆದುಕೊಂಡು ಜನರಿಗೆ ಕೊಡುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಯಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ, ಹಾಗೂ ಸದಸ್ಯರು ಕೂಡಾ ಕೊಳವೆಬಾವಿ ಚಾಲನೆಗೆ ಪೂಜೆ ಸಲ್ಲಿಸಿದ್ದರು. ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದಿನ್ನೂರು ವೆಂಕಟೇಶ್, ವಿ.ಎಸ್‌.ಎಸ್‌.ಎನ್ ಅಧ್ಯಕ್ಷ ಪಿಳ್ಳೇಗೌಡ, ಮಾಜಿ ಅಧ್ಯಕ್ಷ ಎಚ್.ಆನಂದ್, ಎಂ.ಪಿ.ಸಿ.ಎಸ್ ಅಧ್ಯಕ್ಷ ನರಸಿಂಹರೆಡ್ಡಿ, ಮಾಜಿ ಅಧ್ಯಕ್ಷ ಜಯಚಂದ್ರ, ಗ್ರಾಮ ಪಂಚಾಯಿತಿ  ಸದಸ್ಯರಾದ  ಬಿ.ಶೈಲಾ ರಮೇಶ್, ರಾಮಾಂಜಿನಯ್ಯ, ಪ್ರಭಾಕರ್, ತಿಮ್ಮರಾಯಪ್ಪ, ಶ್ವೇತಾ ಮುಂತಾದವರು ಹಾಜರಿದ್ದರು.

ಆರೋಪ ಪ್ರತ್ಯಾರೋಪ: ಈ ಕೊಳವೆಬಾವಿ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ನವರ ನಡುವೆ ವಾಗ್ವಾದ ನಡೆಯಿತು. ಯಂತ್ರವನ್ನು ಗ್ರಾಮಕ್ಕೆ ತಂದ ನಂತರ ಮೊದಲಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಪೂಜೆ ಸಲ್ಲಿಸಿ ಕೊಳವೆಬಾವಿ ಕೊರೆಯಲು ಚಾಲನೆ ನೀಡಲಾಗಿತ್ತು.

ನಂತರ ಅನಂತಕುಮಾರಿ ಚಿನ್ನಪ್ಪ ಅವರು ಪೂಜೆ ಸಲ್ಲಿಸಿ ಮರುಚಾಲನೆ ನೀಡಿದರು. ಈ ಕೊಳವೆಬಾವಿ ಜಿಲ್ಲಾ ಪಂಚಾಯಿತಿಯಿಂದ ಮಂಜೂರಾಗಿದೆ ಎಂದು ಕಾಂಗ್ರೆಸ್‌ನವರು ತಿಳಿಸಿದರು. ಶಾಸಕರು ಇದನ್ನು ಮಂಜೂರು ಮಾಡಿಸಿದ್ದಾರೆ ಎಂದು ಜೆಡಿಎಸ್ ಬೆಂಬಲಿಗರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶಶಿಕಲಾ ಆನಂದ್‌ಕುಮಾರ್ ಅವರು, ಸರ್ಕಾರ ಬರ ವೀಕ್ಷಣೆ ಮಾಡಿ,  ಬರ ನಿರ್ವಹಣಾ ಅನುದಾನದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯುತ್ತಿದೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪೂಜೆ ಸಲ್ಲಿಸುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

ಚುನಾವಣೆ ಗಮನದಲ್ಲಿಟ್ಟುಕೊಂಡು ಈ ರೀತಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಇವರಿಗೆ ಜನರಿಗೆ ನೀರು ಕೊಡುವುದಕ್ಕಿಂತ ತಮ್ಮ ಪಕ್ಷಗಳ ಏಳಿಗೆ ಮುಖ್ಯವಾಗಿ ಬಿಟ್ಟಿದೆ ಎಂದು ಕೆಲ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.