ADVERTISEMENT

‘ಪ್ಯಾಕೇಜ್ ಶಿಕ್ಷಣ: ನಮ್ಮ ದುರಂತ’

ಭಾರತ ಮತ್ತು ಬಹುರೂಪಿ ಸಂಸ್ಕೃತಿ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:36 IST
Last Updated 5 ಜನವರಿ 2017, 19:36 IST

ದೊಡ್ಡಬಳ್ಳಾಪುರ: ಆಧುನಿಕತೆ ಎಷ್ಟೇ ಪ್ರಭಾವ ಬೀರಿದರೂ ಸಂಸ್ಕೃತಿಯ ಮೂಲಧಾತುಗಳು ನಶಿಸುವುದಿಲ್ಲ. ಬದಲಾವಣೆಯನ್ನು ಸ್ವೀಕರಿಸುತ್ತಾ ಬೆಳೆಯುವ ಸಂವೇದನೆ ಎಂದಿಗೂ ಅದನ್ನು ಸಾರಾಸಗಟಾಗಿ ನಿರಾಕರಿಸುವುದಿಲ್ಲ ಎಂದು ವಿಮರ್ಶಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಹೇಳಿದರು.

ಅವರು ನಗರದ ಆರ್.ಎಲ್.ಜಾಲಪ್ಪ ಡಿಪ್ಲೊಮಾ ಕಾಲೇಜಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗುರುವಾರ ನಡೆದ ಗಂಗಮ್ಮ -ಜೆ.ನರಸಿಂಹಸ್ವಾಮಿ ದತ್ತಿ ನಿಧಿ ಉಪನ್ಯಾಸ ಮತ್ತು ಕಾರ್ಯಕ್ರಮ ಮಾಲಿಕೆ ಸಮಾರೋಪ ಸಮಾರಂಭದಲ್ಲಿ ಭಾರತ ಮತ್ತು ಬಹುರೂಪಿ ಸಂಸ್ಕೃತಿ ವಿಚಾರ ಕುರಿತು ಅವರು ಮಾತನಾಡಿದರು.

ರಾಜಕಾರಣ ಆಡಳಿತವನ್ನು ಮಾತ್ರವಲ್ಲದೆ ಜನರ ಭಾವನೆಗಳನ್ನೂ ವಿರೂಪಗೊಳಿಸಿದೆ. ಉದಾತ್ತ ನಾಯಕರನ್ನು ಜಾತಿ, ಧರ್ಮ, ಮತದ ಪರಿಧಿಯಲ್ಲಿ ಸಂಕುಚಿತಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಶಿಕ್ಷಣ ಕೂಡ ಪ್ಯಾಕೇಜ್ ವ್ಯವಸ್ಥೆಯಂತೆ ಕಾಣುತ್ತಿರುವುದು ಭವಿಷ್ಯದ ದುರಂತ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮಾತನಾಡಿ, ಕನ್ನಡದ ಬಗ್ಗೆ ಉದಾಸೀನತೆ ಹೆಚ್ಚುತ್ತಿರುವುದು ಆತಂಕಕಾರಿ. ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ನಿರಂತರ ಪರಿಶ್ರಮ ವಹಿಸಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳುವುದು ಗುರಿ ಸಾಧನೆಯ ಪ್ರಮುಖ ಎಂದರು.

ಆರ್ಎಲ್‌ಜೆಐಟಿ ಪ್ರಾಂಶುಪಾಲ ಡಾ.ಶ್ರೀನಿವಾಸರೆಡ್ಡಿ ,ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರಮೀಳಾ ಮಹದೇವ್,ಮಾಜಿ ಅಧ್ಯಕ್ಷ ಕೆ.ಆರ್.ರವಿಕಿರಣ್, ಎಎಸ್‌ಡಿಯುಐಆರ್ಎಸ್ ಪ್ರಾಂಶುಪಾಲರಾದ ದೇವಿಕಾರಾಣಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್, ವ್ಯವಹಾರ ನಿರ್ವಹಣಾ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶಯ್ಯ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.