ADVERTISEMENT

ಬನ್ನೇರುಘಟ್ಟ: ಚಿಣ್ಣರ ಮೃಗಾಲಯ ದರ್ಶನ ವಿಶಿಷ್ಟ ಕಾರ್ಯಕ್ರಮ

ಕಾಡಿನಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ವನ್ಯಜೀವಿಗಳ ಪರಿಚಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:26 IST
Last Updated 30 ನವೆಂಬರ್ 2017, 9:26 IST
ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮಕ್ಕೆ ಕುಶಾಲಪ್ಪ ಹಾಗೂ ಸುರೇಶ್ ಚಾಲನೆ ನೀಡಿದರು
ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮಕ್ಕೆ ಕುಶಾಲಪ್ಪ ಹಾಗೂ ಸುರೇಶ್ ಚಾಲನೆ ನೀಡಿದರು   

ಆನೇಕಲ್‌: ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ತಡೆಯಲು ಕಾಡಿನಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ವನ್ಯಜೀವಿಗಳ ಪರಿಚಯ ಮಾಡಿಕೊಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಚಿಣ್ಣರ ಮೃಗಾಲಯ ದರ್ಶನ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪನಿರ್ದೇಶಕ ಕುಶಾಲಪ್ಪ ತಿಳಿಸಿದರು.

ಅವರು ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಾಡಂಚಿನ ಸರ್ಕಾರಿ ಶಾಲೆಗಳಿಗೆ ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ, ‘ಮಾನವ ಕಾಡನ್ನು ಒತ್ತುವರಿ ಮಾಡಿದರೆ ಪ್ರಾಣಿಗಳಿಗೆ ಆವಾಸದ ಕೊರತೆ ಉಂಟಾಗಿ ನಾಡಿನತ್ತ ಬರುತ್ತವೆ. ಮಾನವನಿಗಿದ್ದಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಹಾಗಾಗಿ ಪ್ರಾಣಿಗಳಿಗೆ ತೊಂದರೆ ನೀಡಬಾರದು. ಜೀವಸಂಕುಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಾವ ಪ್ರಾಣಿಯು ಸಹ ಮನುಷ್ಯನಿಗೆ ಏಕಾಏಕಿ ತೊಂದರೆ ಉಂಟು ಮಾಡುವುದಿಲ್ಲ’ ಎಂದರು.

ಕನಕಪುರ ತಾಲ್ಲೂಕು ದೊಡ್ಡಮರಳವಾಡಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಸಫಾರಿ ಬಸ್‌ ಮೂಲಕ ಸುಮಾರು 150ವಿದ್ಯಾರ್ಥಿಗಳನ್ನು ಮೃಗಾಲಯಕ್ಕೆ ಭೇಟಿ ನೀಡಿ ಸಫಾರಿ, ಚಿಟ್ಟೆ ಪಾರ್ಕ್‌ ಹಾಗೂ ಮೃಗಾಲಯವನ್ನು ವೀಕ್ಷಿಸಿದರು. ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಲಾಗಿದೆ ಎಂದು ಉದ್ಯಾನದ ಶಿಕ್ಷಣಾಧಿಕಾರಿ ಅಮಲಾ ತಿಳಿಸಿದರು.

ಯೋಜನಾಧಿಕಾರಿ ಶ್ರೀನಿವಾಸ್, ಬನ್ನೇರುಘಟ್ಟ ಉದ್ಯಾನ ವಲಯ ಅರಣ್ಯಾಧಿಕಾರಿ ಮನ್ಸೂರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.