ADVERTISEMENT

ಬಲಿಜ ಸಮಾಜದ ಸಮಾವೇಶ ನಾಳೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:42 IST
Last Updated 27 ಮೇ 2017, 9:42 IST

ಆನೇಕಲ್‌: ಕರ್ನಾಟಕ ಬಲಿಜ ಮಹಾಸಭಾದ ವತಿಯಿಂದ ಬಲಿಜ ಬೃಹತ್ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೇ 28ರಂದು ನಡೆಯಲಿದ್ದು ಆನೇಕಲ್ ತಾಲ್ಲೂಕಿನಿಂದ 15 ಸಾವಿರಕ್ಕೂ ಹೆಚ್ಚು ಮಂದಿ ಸಮಾಜದ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು ತಿಳಿಸಿದರು.

ಅವರು ಪಟ್ಟಣದಲ್ಲಿ ಬಲಿಜ ಸಮಾವೇಶದ ಬಗ್ಗೆ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದವರೆಗೂ ಸಮುದಾಯವನ್ನು ಸಂಘಟಿಸಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.

ಸಮಾಜವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡಲಾಗಿದೆ. ಆದರೆ ಶಿಕ್ಷಣಕ್ಕೆ ಮಾತ್ರ ಮೀಸಲಾತಿ ಮಾಡಿದ್ದು ಉದ್ಯೋಗದಲ್ಲಿ ಮೀಸಲಾತಿ ಸಿಗಲಿಲ್ಲ. ಹಾಗಾಗಿ 2ಎ ಪ್ರವರ್ಗಕ್ಕೆ ಪೂರ್ಣ ಪ್ರಮಾಣದಲ್ಲಿ ಸೇರ್ಪಡೆ ಮಾಡಿಲ್ಲ. ಇದರಿಂದ ಸಾವಿರಾರು ಮಂದಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡಲಾಗುವುದು ಎಂದರು.

ADVERTISEMENT

ರಾಜಕೀಯ ಪ್ರಾತಿನಿಧ್ಯ ಪಡೆಯುವುದು, ಸಮಾಜವನ್ನು ಜಾಗೃತಗೊಳಿಸಲು, ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸಮಾವೇಶ ಆಯೋಜಿಸಲಾಗಿದೆ. ಎಲ್ಲಾ ಪಕ್ಷಗಳ ರಾಜ್ಯ ಮಟ್ಟದ ಮುಖಂಡರು ಹಾಗೂ ಸಮಾಜದ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು. ಕರ್ನಾಟಕ ಬಲಿಜ ಮಹಾಸಭಾದ ಮುಖಂಡರಾದ ದಿನ್ನೂರು ಪಿ.ರಾಜು, ಮುರುಳಿಕೃಷ್ಣ, ಸುರೇಶ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.