ADVERTISEMENT

ಬಿಡುಗಡೆಯಾಗದ ನಗರೋತ್ಥಾನ ಯೋಜನೆ ಹಣ

ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣಹೊಸಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 5:46 IST
Last Updated 7 ಡಿಸೆಂಬರ್ 2017, 5:46 IST

ಆದಿನಾರಾಯಣಹೊಸಹಳ್ಳಿ (ದೊಡ್ಡಬಳ್ಳಾಪುರ): ‘ನಗರೋತ್ಥಾನ ಯೋಜನೆಯಲ್ಲಿ ಕೇಂದ್ರದಿಂದ ಯಾವುದೇ ಅನುದಾನ ನಗರಸಭೆಗೆ ಬಂದಿಲ್ಲ. ಆದರೆ ಇಲ್ಲಿನ ವಿರೋಧ ಪಕ್ಷದ ಮುಖಂಡರು ಎಲ್ಲವೂ ನಮ್ಮದೇ ಹಣ ಎಂದು ಸುಳ್ಳು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿನಾರಾಯಣ ಹೊಸಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಅಧಿಕಾರದ ಅವಧಿಯಲ್ಲಿ ತಾಲ್ಲೂಕಿಗೆ ₹ 700 ಕೋಟಿ ಅನುದಾನ ತಂದು ಕೆಲಸ ಮಾಡಲಾಗಿತ್ತು’  ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ 2008 ರಿಂದ 2013ರ ವರೆಗಿನ ತಾಲ್ಲೂಕು ಪಂಚಾಯಿತಿಯಲ್ಲಿನ ಅಂಕಿ
ಅಂಶಗಳನ್ನು ನೋಡಿದರೆ ಕೇವಲ ₹ 32 ಕೋಟಿ ಅನುದಾನ ತಂದು ಕಾಂಕ್ರಿಟ್‌ ರಸ್ತೆಗಳ ಕೆಲಸ ಮಾಡಿಸಲಾಗಿದೆ ಎಂದರು.

ADVERTISEMENT

ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ಶೀಘ್ರದಲ್ಲೇ ಅಸ್ಥಿತ್ವಕ್ಕೆ
ಬರಲಿದೆ. ತಾಲ್ಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವಿಸ್ತಾರ ದೊಡ್ಡದಾಗಿದೆ. ಹೀಗಾಗಿ ಹೆಚ್ಚುವರಿಯಾಗಿ ಒಂದು ಗ್ರಾಮ ಪಂಚಾಯಿತಿಯನ್ನು ರಚಿಸಲು ಚಿಂತನೆ ನಡೆದಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೃಷ್ಣಪ್ಪ ಮಾತನಾಡಿ, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವಿಲೇವಾರಿಗೆ ಸ್ಥಳ ನೀಡಬೇಕು. ಒಳಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಹಿರಿಯ ಮುಖಂಡ ಆರ್‌.ಜಿ.ವೆಂಕಟಾಚಲಯ್ಯ ಮಾತನಾಡಿ, ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಜನರು ಮರೆಯಬಾರದು. ಚುನಾವಣೆಯ ಸಂದರ್ಭದಲ್ಲಿ ಟೀಕೆಗಳು ಸಹಜ. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು ಎಂದರು.

ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕೋಟಿಗಳಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರೇಣುಕಾರಾಜಣ್ಣ, ಹಸನ್‌ಘಟ್ಟ ರವಿ, ಚಿಕ್ಕಅಂಜಿನಪ್ಪ, ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಬಿ.ಸಿ.ಆನಂದ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿಲ್ಪ ಮುನಿಶಂಕರ್‌, ಸದಸ್ಯರಾದ ರತ್ನಮ್ಮ, ರಾಜಗೋಪಾಲ್‌, ನೇತ್ರಾವತಿ, ಸರಸ್ವತಿ, ರಾಜು, ಪ್ರೇಮ್‌
ಕುಮಾರ್‌, ಮುನಿರತ್ನಮ್ಮ, ವಿನೋದ್‌ಕುಮಾರ್‌, ಪ್ರಸನ್ನ, ಜಯರಾಂ, ನಾರಾಯಣಸ್ವಾಮಿ, ಪಾರ್ವತಮ್ಮ, ಮಂಜು
ನಾಥ್‌, ಅಂಬರೀಶ್‌, ಪಿ.ಗಣೇಶ್‌, ಎನ್‌.ಎ.ಬಚ್ಚೇಗೌಡ, ಎಂಪಿಸಿಎಸ್‌ ಅಧ್ಯಕ್ಷ ರಮೇಶ್‌, ಮುಖಂಡರಾದ ಸುಬ್ಬೇ
ಗೌಡ, ಬಿ.ಎಚ್‌.ಕೆಂಪಣ್ಣ, ತಿ.ರಂಗರಾಜು, ಪಿಡಿಒ ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.