ADVERTISEMENT

ಬೇಸಿಗೆಯಲ್ಲೂ ನಿರಂತರ ವಿದ್ಯುತ್‌: ಡಿಕೆಶಿ

ಬಿಡದಿ-– ರೈಲ್ವೆ ಉಪಕೇಂದ್ರ ನಡುವಿನ ವಿದ್ಯುತ್‌ ಮಾರ್ಗಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 12:04 IST
Last Updated 9 ಮಾರ್ಚ್ 2017, 12:04 IST
ಬಿಡದಿ: ‘ಬೇಸಿಗೆಯ ಅವಧಿಯಲ್ಲೂ ಜನಸಾಮಾನ್ಯರು ಹಾಗೂ ಕೈಗಾರಿಕೆಗಳಿಗೆ ಅಗತ್ಯವಾದಷ್ಟು ವಿದ್ಯುತ್‌ ಪೂರೈಸಲು ಇಂಧನ ಇಲಾಖೆ ಬದ್ಧವಾಗಿದೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. 
 
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಬಿಡದಿ 220/66 ಕೆವಿ ವಿದ್ಯುತ್ ಉಪಕೇಂದ್ರದಿಂದ 220/25 ಕೆವಿ ರೈಲ್ವೆ ವಿದ್ಯುತ್ ಉಪಕೇಂದ್ರದ ವರೆಗೆ 220 ಕೆವಿ ವಿದ್ಯುತ್ ಮಾರ್ಗವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಈ ಕೇಂದ್ರದಿಂದ ಬಿಡದಿ ರೈಲ್ವೆ ನಿಲ್ದಾಣವರೆಗೂ ವಿದ್ಯುತ್ ಪೂರೈಸಲಾಗುತ್ತದೆ.
 
ಇದರಿಂದ ಬೆಂಗಳೂರು–ಮೈಸೂರು ಜೋಡಿ ರೈಲು ಮಾರ್ಗಕ್ಕೆ ವಿದ್ಯುತ್‌ ಪೂರೈಕೆ ನಿಯಮಿತವಾಗಲಿದೆ. ಈ ಮೂಲಕ ವಿದ್ಯುತ್‌ ಆಧರಿತ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ’ ಎಂದು ಅವರು ವಿವರಿಸಿದರು. 
 
‘ಈಗಾಗಲೇ ಕೆಂಗೇರಿವರೆಗೆ ಮೆಟ್ರೊ ರೈಲು ಸಂಪರ್ಕವಿದ್ದು, ಮುಂದೊಂದು ದಿನ ಬಿಡದಿವರೆಗೂ ಅದು ವಿಸ್ತರಣೆಯಾಗಲಿದೆ. ವೈಟ್‌ಫೀಲ್ಡ್‌–ರಾಮನಗರ ನಡುವೆ ಮೆಮೊ ರೈಲು ಸಂಚಾರ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಮೈಸೂರಿನವರೆಗೂ ಇದು ವಿಸ್ತರಣೆ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು. 
 
‘ಬೆಂಗಳೂರು ದಕ್ಷಿಣ ಪ್ರದೇಶಗಳಾದ ಸೋಮನಹಳ್ಳಿ, ಬಿಡದಿ ಪ್ರದೇಶಗಳನ್ನು ಶೀಘ್ರವೇ ಮೇಲ್ದರ್ಜೆಗೇರಿಸಲಾಗುವುದು. ಈ ಭಾಗದಲ್ಲಿ ಜನರು ಗುಳೆ ಹೋಗುವುದನ್ನು ತಡೆಗಟ್ಟಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಜನರ ಆಶಯವಾಗಿದೆ’ ಎಂದರು. 
 
‘ರೈಲ್ವೆ ಇಲಾಖೆಯು ತನ್ನ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದಲೇ ವಿದ್ಯುತ್ ಖರೀದಿಸಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರ ಮೊರೆ ಹೋಗಬಾರದು’ ಎಂದು ಆಗ್ರಹಿಸಿದರು. 
 
ಸಂಸದ ಡಿ.ಕೆ. ಸುರೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ.ರಾಜೇಶ್, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಸದಸ್ಯ ಎ.ಮಂಜು, ಬಿಡದಿ ಪುರಸಭೆ ಅಧ್ಯಕ್ಷೆ ವೆಂಕಂಟೇಶಮ್ಮ ರಾಮಕೃಷ್ಣಯ್ಯ, ಉಪಾಧ್ಯಕ್ಷೆ ವೈಶಾಲಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜು, ಬೆಸ್ಕಾಂನ ಮುಖ್ಯ ಎಂಜಿನಿಯರ್‌ ಚಂದ್ರಶೇಖರ್, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 
 
ವಿದ್ಯುತ್‌ಚಾಲಿತ ರೈಲು ಸೇವೆ ಶೀಘ್ರ
ನೈರುತ್ಯ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ಸಂಜೀವ್‌ ಮಿತ್ತಲ್‌ ಕೇಂದ್ರದ ಕುರಿತು ಮಾಹಿತಿ ನೀಡಿದರು.‘ಈ ಯೋಜನೆಯಿಂದಾಗಿ ಬೆಂಗಳೂರು, -ಬಿಡದಿ, -ರಾಮನಗರ, -ಶೆಟ್ಟಿಹಳ್ಳಿ- ಹಾಗೂ ಮಂಡ್ಯ ನಡುವೆ ಸುಮಾರು 93 ಕಿಮೀ ಉದ್ದದ ರೈಲ್ವೆ ಮಾರ್ಗಕ್ಕೆ ವಿದ್ಯುತ್‌ ಸಂಪರ್ಕ ಸಿಗಲಿದೆ’ ಎಂದರು.

‘ಇದರಿಂದ ಹೊಸದಾಗಿ ಮೆಮು ರೈಲು ಸಂಚಾರಕ್ಕೆ ಅನುಕೂಲವಾಗಲಿದೆ. ಬೆಂಗಳೂರು–ಮೈಸೂರು ನಡುವೆ ಶೀಘ್ರ ವಿದ್ಯುತ್‌ ಚಾಲಿತ ರೈಲು ಸಂಚಾರ ಸೇವೆ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.