ADVERTISEMENT

ಮಳೆ ಕೊರತೆಯಿಂದ ಬಿತ್ತನೆಗೆ ತೀವ್ರ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 11:00 IST
Last Updated 22 ಜುಲೈ 2017, 11:00 IST
ಸಾಸಲು ಹೋಬಳಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರ ಉಳುಮೆ ಮಾಡಿರುವ ಭೂಮಿಯೇ ಕಾಣುತ್ತಿದೆ. ಆದರೆ, ಬಿತ್ತನೆಯೇ ಪ್ರಾರಂಭವಾಗಿಲ್ಲ
ಸಾಸಲು ಹೋಬಳಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರ ಉಳುಮೆ ಮಾಡಿರುವ ಭೂಮಿಯೇ ಕಾಣುತ್ತಿದೆ. ಆದರೆ, ಬಿತ್ತನೆಯೇ ಪ್ರಾರಂಭವಾಗಿಲ್ಲ   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ರಾಗಿ ಸೇರಿ ದಂತೆ ಎಲ್ಲ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ರೈತರು ಕಂಗಾಲಾಗಿದ್ದು, ಈ ಬಾರಿಯು ಬೆಳೆ ಕೈಕೊಡುವ ಭೀತಿಯಲ್ಲಿದ್ದಾರೆ. 2016ರ ಮುಂಗಾರು ಹಂಗಾಮಿಗೆ ಹೋಲಿಕೆ ಮಾಡಿದರೆ ಈ ವರ್ಷದ ಜುಲೈ ಮೊದಲ ವಾರಕ್ಕೆ ರಾಗಿ ಬಿತ್ತನೆ ಮುಕ್ತಾಯವಾಗಬೇಕಿತ್ತು.

ಆದರೆ ಜುಲೈ ಕೊನೆಯ ವಾರ ಆರಂಭವಾದರೂ ಇನ್ನೂ ರಾಗಿ ಬಿತ್ತನೆಯನ್ನೇ ಮಾಡಿಲ್ಲ ಎನ್ನುತ್ತಾರೆ ತಾಲ್ಲೂಕಿನ ತೂಬ ಗೆರೆ ಹೋಬಳಿಯ ದೊಡ್ಡರಾಯಪ್ಪನ ಹಳ್ಳಿ  ಗ್ರಾಮದ ರೈತ ಡಿ.ಎನ್‌.ರಾಜಣ್ಣ. ತಾಲ್ಲೂಕಿನ ಸಾಸಲು ಹೋಬಳಿಯ ಗುಂಡಮಗೆರೆ, ಹೊಸಹಳ್ಳಿ, ಆರೂಢಿ, ಕೊಟ್ಟಿಗೆಮಂಚೇನಹಳ್ಳಿ ಸುತ್ತ ಮಳೆ ಹಾಗೂ ನೀರಾವರಿ ಆಶ್ರಯದಲ್ಲಿ ಕೆಲವೇ ಕೆಲ ರೈತರು ಮುಸುಕಿನಜೋಳ ಬಿತ್ತನೆ ಮಾಡಿದ್ದಾರೆ. ಉಳಿದಂತೆ ಸಾಸಲು ಹೋಬಳಿಯಲ್ಲಿ ರಾಗಿ ಬಿತ್ತನೆಯೇ ನಡೆದಿಲ್ಲ.

ತಾಲ್ಲೂಕಿನಲ್ಲೇ ಅತಿ ಹೆಚ್ಚು ರಾಗಿ, ಮುಸುಕಿನಜೋಳ ಬೆಳೆಯುವ ಹೋಬಳಿಗಳಲ್ಲಿ ಸಾಸಲು ಪ್ರಥಮ ಸ್ಥಾನದಲ್ಲಿದೆ. ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ, ಚಿಕ್ಕಬೆಳವಂಗಲ, ಚನ್ನವೀರನಹಳ್ಳಿ, ದೊಡ್ಡಹೆಜ್ಜಾಜಿ, ಪುರುಷನಹಳ್ಳಿ ಭಾಗದಲ್ಲಿ ಮಾತ್ರ ನೀರಾವರಿ ಸೌಲಭ್ಯ ಹೊಂದಿರುವ ರೈತರು ಮುಸುಕಿನಜೋಳ ಬಿತ್ತನೆ ಮಾಡಿದ್ದಾರೆ.
ಉಳಿದಂತೆ ಕೆಲವು ರೈತರು ಮಳೆ ಕಡಿಮೆ ಇದ್ದರೂ ರಾಗಿ ಬಿತ್ತನೆ ಮಾಡಿದ್ದಾರೆ. ಈಗಿನ ಸನ್ನಿವೇಶ ಮುಂದುವರೆದರೆ ಈ ಬಾರಿಯೂ ತಾಲ್ಲೂಕಿನಲ್ಲಿ ಬೆಳೆ ಕುಂಠಿತವಾಗಲಿದೆ ಎನ್ನುತ್ತಾರೆ ದೊಡ್ಡಬೆಳವಂಗಲ ಗ್ರಾಮದ ರೈತ ಸಿ.ಎಚ್‌.ರಾಮಕೃಷ್ಣ.

ADVERTISEMENT

ಮೇ ತಿಂಗಳ ಮೊದಲ ವಾರದಿಂದ ಮಳೆ ಬೀಳಲು ಪ್ರಾರಂಭವಾಗಿತ್ತು. ಖುಷ್ಕಿ ಭೂಮಿಯನ್ನು ಹೊಂದಿರುವ ರೈತರು ಉಳುಮೆ ಮಾಡಿ ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಂಡಿದ್ದರು. ನೀರಾವರಿ ಮೂಲಗಳನ್ನು ಹೊಂದಿದ್ದ ರೈತರು ಮುಸುಕಿನಜೋಳ ನಾಟಿ ಮಾಡಿದ್ದರು. ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉಳುಮೆಗೆ ತೊಂದರೆಯಾಗದಂತೆ ಹದವಾಗಿ ಬಿದ್ದಿದ್ದರಿಂದ ಬಹುತೇಕ ರೈತರು ಉಳುಮೆ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಕೆರೆಗೂ ನೀರು ಬಂದಿಲ್ಲ ಇದರಿಂದ ಇನ್ನೆಡೆಯಾಗಿದೆ.

ಕೃಷಿ ಇಲಾಖೆ ಅಂಕಿ ಅಂಶದಂತೆ ಜೂನ್‌ ತಿಂಗಳಲ್ಲಿ ವಾಡಿಕೆ ಮಳೆ 58 ಮಿ.ಮೀ ಬೀಳಬೇಕಿತ್ತು. ಆದರೆ ಒಂದೆರಡು ದಿನ ಜೋರು ಮಳೆ ಬಂದಿದ್ದರಿಂದ ಕಸಬಾ ಹೊಬಳಿಯಲ್ಲಿ 194 ಮಿ.ಮೀ, ದೊಡ್ಡಬೆಳವಂಗಲ ಹೋಬಳಿ 220 ಮಿ.ಮೀ, ಕನಸವಾಡಿ ಹೋಬಳಿ 191 ಮಿ.ಮೀ, ಸಾಸಲು 277 ಮಿ.ಮೀ, ತೂಬಗೆರೆ ಹೋಬಳಿ 287 ಮಿ.ಮೀ ಮಳೆಯಾಗಿತ್ತು. ಬಿತ್ತನೆಗೆ ಅವಶ್ಯಕವಾಗಿ ಜುಲೈ ತಿಂಗಳಲ್ಲಿ ಹದವಾಗಿ ಮಳೆಯಾಗಬೇಕಿತ್ತು. ಆದರೆ ವಾಡಿಕೆ ಮಳೆ 91 ಮಿ.ಮೀ ಬೀಳಬೇಕಾಗಿದ್ದರು  ಇಲ್ಲಿಯವರೆಗೂ ಕೇವಲ 25 ಮಿ.ಮೀ ಮಳೆಯಾಗಿದೆ.

ಕಸಬಾಹೋಬಳಿಯಲ್ಲಿ 18ಮಿ.ಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 25 ಮಿ.ಮೀ, ಕನಸವಾಡಿಯಲ್ಲಿ 28 ಮಿ.ಮೀ, ಸಾಸಲು ಹೋಬಳಿಯಲ್ಲಿ 14 ಮಿ.ಮೀ, ಸಾಸಲು 14 ಮಿ.ಮೀ, ತೂಬಗೆರೆ ಹೋಬಳಿಯಲ್ಲಿ 25 ಮಿ.ಮೀ ಮಳೆಯಾಗಿದೆ. ಕೃಷಿ ಇಲಾಖೆಯ 2017–18ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಗುರಿ ಹಾಗೂ ಸಾಧನೆ (ಹೆಕ್ಟೇರ್‌ಗಳಲ್ಲಿ): ರಾಗಿ ನೀರಾವರಿ ಪ್ರದೇಶದಲ್ಲಿ 204 ಇದ್ದರೆ ಸಾಧನೆ 95, ಖುಷ್ಕಿಯಲ್ಲಿ 8,936 ಇದ್ದರೆ ಸಾಧನೆ 288, ಮುಸುಕಿನಜೋಳ ನೀರಾವರಿ ಪ್ರದೇಶದಲ್ಲಿ  1,768 ಇದ್ದರೆ ಸಾಧನೆ 286 ಆಗಿದೆ.

ಖುಷ್ಕಿಯಲ್ಲಿ  8,432 ಇದ್ದರೆ ಸಾಧನೆ 364, ತೃಣಧಾನ್ಯ ಖುಷ್ಕಿಯಲ್ಲಿ 25 ಇದ್ದರೆ ಸಾಧನೆ 5,ಪಾಪ್‌ಕಾರ್ನ್‌ ನೀರಾ ವರಿ ಪ್ರದೇಶದಲ್ಲಿ 120 ಇದ್ದರೆ ಸಾಧನೆ 16, ಮೇವಿನಜೋಳ ನೀರಾವರಿ ಪ್ರದೇ ಶದಲ್ಲಿ 730 ಇದ್ದರೆ ಸಾಧನೆ 145, ತೊಗರಿ ನೀರಾವರಿ 136 ಇದ್ದರೆ ಸಾಧನೆ 46, ಖುಷ್ಕಿಯಲ್ಲಿ 449 ಇದ್ದರೆ ಸಾಧನೆ 118, ಅವರೆ  ನೀರಾವರಿ 44 ಇದ್ದರೆ ಸಾಧನೆ 5, ಖುಷ್ಕಿಯಲ್ಲಿ 336 ಇದ್ದರೆ ಸಾಧನೆ 35, ಅಲಸಂದೆ ನೀರಾವರಿ 160 ಇದ್ದರೆ ಸಾಧನೆ 19, ಖುಷ್ಕಿಯಲ್ಲಿ  104 ಇದ್ದರೆ ಸಾಧನೆ 44 ಹೆಕ್ಟೇರ್‌.       

ಬಿತ್ತನೆ ಬೀಜ ಖರೀದಿಸಿದ ರೈತರು
ತಾಲ್ಲೂಕಿನಲ್ಲಿ ಮೇ ಹಾಗೂ ಜೂನ್‌ನಲ್ಲಿ ಹದವಾಗಿ ಮಳೆ ಬಿದ್ದಿದ್ದರಿಂದ ರೈತರು ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿಕೊಂಡಿದ್ದಾರೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ತಿಮ್ಮೇಗೌಡ ತಿಳಿಸಿದ್ದಾರೆ.

ಕೃಷಿ ಇಲಾಖೆ ಮೂಲಕ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ಈಗಾಗಲೇ ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಖರೀದಿ ಮಾಡಿದ್ದಾರೆ. ಆದರೆ ಮಳೆಯ ಕೊರತೆಯಿಂದಾಗಿ ಬಿತ್ತನೆಗೆ ಮುಂದಾಗಿಲ್ಲ ಎನ್ನುತ್ತಾರೆ.                                                                   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.