ADVERTISEMENT

ಮೂರು ವರ್ಷದಲ್ಲಿ ಚೀನಾದಿಂದ ರೇಷ್ಮೆ ಆಮದು ಬಂದ್

ಕೇಂದ್ರ ರೇಷ್ಮೆ ಮಂಡಳಿ ಬೀಜೋತ್ಪಾದನಾ ಕೇಂದ್ರಕ್ಕೆ ಅಧ್ಯಕ್ಷರ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:51 IST
Last Updated 2 ಫೆಬ್ರುವರಿ 2017, 6:51 IST
ಮೂರು ವರ್ಷದಲ್ಲಿ ಚೀನಾದಿಂದ ರೇಷ್ಮೆ ಆಮದು ಬಂದ್
ಮೂರು ವರ್ಷದಲ್ಲಿ ಚೀನಾದಿಂದ ರೇಷ್ಮೆ ಆಮದು ಬಂದ್   

ವಿಜಯಪುರ : ಚೀನಾದಿಂದ ಭಾರತ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆ ನೂಲನ್ನು   ಮೂರು ವರ್ಷದಲ್ಲಿ ಸಂಪೂರ್ಣವಾಗಿ ನಿಲ್ಲಿಸಿ, ನಮಗೆ ಅಗತ್ಯವಿರುವಷ್ಟು ಗುಣಮಟ್ಟದ ರೇಷ್ಮೆನೂಲನ್ನು ನಮ್ಮ ದೇಶದಲ್ಲೆ ಉತ್ಪಾದನೆ ಮಾಡಲು ಅಗತ್ಯವಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಹೇಳಿದರು.

ಪಟ್ಟಣದ ಕೇಂದ್ರ ರೇಷ್ಮೆ ಮಂಡಳಿ ಬೀಜೋತ್ಪಾದನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ದ್ವಿತಳಿ ಗೂಡಿನ ಉತ್ಪಾದನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.

ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆ ಉತ್ತಮ ಗುಣಮಟ್ಟದಿಂದ ಕೂಡಿರುವ ಸತ್ಯ. ಆಮದು ಮಾಡಿಕೊಳ್ಳುತ್ತಿರುವುದು ಸತ್ಯ. ನಮ್ಮ ದೇಶದ ಬಹುತೇಕ ಭಾಗಗಳಲ್ಲಿ ಗುಣಮಟ್ಟದ ರೇಷ್ಮೆನೂಲು ಉತ್ಪಾದನೆ ಯಾಗದೆ ಇರುವ ಕಾರಣ ಅನಿವಾರ್ಯವಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅಗತ್ಯವಿರುವಷ್ಟು ಗುಣಮಟ್ಟದ ದ್ವಿತಳಿ ರೇಷ್ಮೆ ನೂಲು ಉತ್ಪಾದನೆ ಮಾಡಲು ರೈತರಿಗೆ ಹಾಗೂ ನೂಲು ಬಿಚ್ಚಾಣಿಕೆದಾರರಿಗೆ ಹೊಸ ಹೊಸ ತಂತ್ರಜ್ಞಾನವುಳ್ಳ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತದೆ.

ತೀವ್ರ ನೀರಿನ ಬವಣೆ ಅನುಭವಿಸುತ್ತಿರುವ ಬಯಲು ಸೀಮೆಯಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯನ್ನೇ ನಂಬಿಕೊಂಡಿರುವ ರೈತರೇ ಹೆಚ್ಚಾಗಿದ್ದು ನೀರಿನ ಕೊರತೆ ಹಾಗೂ ಭೂಮಿಯ ಬೆಲೆಗಳ ಏರಿಕೆಯಿಂದಾಗಿ ಈಚೆಗೆ ರೇಷ್ಮೆಯಿಂದ ರೈತರು ವಿಮುಖರಾಗುತ್ತಿದ್ದಾರೆ.  ಅವರನ್ನು ಪ್ರೋತ್ಸಾಹಿಸಲು ನೂರು ಮೊಟ್ಟೆಗೆ 130 ಕೆ.ಜಿ ಯಷ್ಟು ಗೂಡು ಉತ್ಪಾದನೆ ಮಾಡುವಂತಹ ದ್ವಿತಳಿ ಹೊಸ ತಳಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಸುಮಾರು ₹ 14 ಲಕ್ಷ ರೂಪಾಯಿಗಳು ಬೆಲೆ ಬಾಳುವ ಮಲ್ಟಿಎಂಡ್ ಯಂತ್ರೋಪಕರಣಗಳನ್ನು ₹  10 ಲಕ್ಷ ಸಬ್ಸಿಡಿ ನೀಡಿ ಕೇವಲ ₹ 4 ಲಕ್ಷ ಕ್ಕೆರೂಪಾಯಿಗಳಿಗೆ ಕೊಡುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಚೈನಾ ರೇಷ್ಮೆಗಿಂತ ಉತ್ತಮ ಎಳೆ ತೆಗೆಯುವಂತಹ ಎ.ಆರ್.ಮಿಷನ್ ₹ 1.30 ಕೋಟಿ ವೆಚ್ಚದ ಯಂತ್ರವನ್ನು ₹ 65 ಲಕ್ಷ ಸಬ್ಸಿಡಿ ಕೊಡಲಾಗುತ್ತಿದ್ದು, ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ರೈತರು ಗೂಡು ಬೆಳೆಯುವುದರ ಜೊತೆಗೆ ಯುವಕರಿಗೆ ಮಣ್ಣಿನಿಂದ ರೀಲಿಂಗ್ ವರೆಗೆ, ಬಟ್ಟೆ ಉತ್ಪಾದನೆ ಸೇರಿದಂತೆ ಎಲ್ಲಾ ಬಗೆಯ ತರಬೇತಿಗಳನ್ನು ಎರಡು ತಿಂಗಳ ಕಾಲ ಉಚಿತವಾಗಿ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.