ADVERTISEMENT

ರಾಜ್ಯದ 80 ಕೇಂದ್ರಗಳಲ್ಲಿ ಮೇವು ದಾಸ್ತಾನು

ಹೆಸರುಘಟ್ಟ, ಹೊಸಕೋಟೆ ಬಳಿ ಹಸಿ ಮೇವು: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:55 IST
Last Updated 2 ಫೆಬ್ರುವರಿ 2017, 6:55 IST
ರಾಜ್ಯದ 80 ಕೇಂದ್ರಗಳಲ್ಲಿ ಮೇವು ದಾಸ್ತಾನು
ರಾಜ್ಯದ 80 ಕೇಂದ್ರಗಳಲ್ಲಿ ಮೇವು ದಾಸ್ತಾನು   

ದೇವನಹಳ್ಳಿ : ಸತತ ಬರಗಾಲದ ಸಂಕಷ್ಟದಲ್ಲಿರುವ ರಾಜ್ಯದಲ್ಲಿ ವಿವಿಧೆಡೆ 80 ಕೇಂದ್ರಗಳಲ್ಲಿ ಪಶುಮೇವು ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ತಾಲ್ಲೂಕಿನ ಪೂಜನಹಳ್ಳಿ ಬಳಿ ಮೇವು ದಾಸ್ತಾನು ಪರಿಶೀಲಿಸಿ ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ 6000 ಟನ್‌ ಮೆಕ್ಕೆಜೋಳದ ಕಡ್ಡಿ ಮತ್ತು ಭತ್ತದ ಮೇವು ದಾಸ್ತಾನು ಮಾಡಲಾಗಿದೆ,  15 ದಿನ ಕಳೆದ ನಂತರ ಶೇಕಡ 50 ರಷ್ಟು  ಕಡಿಮೆ ದರದಲ್ಲಿ ಅಂದರೆ ಪ್ರತಿ ಕೆಜಿಗೆ ಎರಡು ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಆರಂಭಿಕ ದಾಸ್ತಾನು ಮಾಡಿದ್ದು, ಫೆಬ್ರುವರಿ ಅಂತಿಮ ವಾರದೊಳಗೆ ಮತ್ತಷ್ಟು ಮೇವು ದಾಸ್ತಾನು ಮಾಡಲಾಗುತ್ತಿದೆ ಎಂದರು.

ರಾಗಿ ಬೆಳೆ ವಿಫಲವಾಗಿರುವುದರಿಂದ ಮೆಕ್ಕೆಜೋಳ ಮೇವು ಅನಿವಾರ್ಯ ವಾಗಿದೆ ರಾಜ್ಯದಲ್ಲಿ ಪ್ರಸ್ತುತ ₹ 240 ಕೋಟಿ ಮತ್ತು ಗ್ರಾಮಾಂತರ ಜಿಲ್ಲೆಗೆ ₹ 8 ಕೋಟಿ ಬರ ನಿರ್ವಹಣೆ ಅನುದಾನ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇಡಲಾಗಿದೆ. ಎಸ್‌ಟಿಆರ್‌ಎಫ್‌ ಯೋಜನೆಯಡಿ ಪ್ರತಿ ತಾಲ್ಲೂಕಿಗೆ ₹ 20 ಲಕ್ಷ, ಜಿಲ್ಲೆಗೆ ₹ 60 ಲಕ್ಷ ಅನುದಾನ ಮೀಸಲಿದೆ. ಕುಡಿಯುವ ನೀರು ತುರ್ತು ಇರುವ ಕಡೆ ತಕ್ಷಣ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಪೂರೈಕೆ ವೆಚ್ಚ ಜಿಲ್ಲಾಧಿಕಾರಿ ಭರಿಸಲಿದ್ದಾರೆ, ಸ್ಥಳೀಯವಾಗಿ ಆಯ್ಕೆಗೊಂಡ ಜನಪ್ರತಿನಿಧಿಗಳು ಬರ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರೆ ಮಾತ್ರ ಯೋಜನೆ ಸಫಲತೆ ಕಾಣಲು ಸಾಧ್ಯವೆಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಬರನಿರ್ವಹಣೆ ಮಾಡಿಕೊಂಡಿರುವ ಸಿದ್ದತೆ ತೃಪ್ತಿ ಇದೆ. ನರೇಗಾ ಯೋಜನೆಗೆ ಹೆಚ್ಚಿನ ಅನುದಾನ ಬೇಕಾಗಿದೆ.
ಮೂರು ವರ್ಷದಿಂದ ರೈತರು ತತ್ತರಿಸಿದ್ದಾರೆ ಇನ್ನಷ್ಟು ಅನುದಾನ ತಾಲ್ಲೂಕಿಗೆ ಬೇಕು ಎಂದರು. ಜಿಲ್ಲಾ ಪಂಚಾಯಿತ ಉಪಾಧ್ಯಕ್ಷೆ ಅನಂತಕುಮಾರಿ, ಜಿಲ್ಲಾಧಿಕಾರಿ ಪಾಲಯ್ಯ, ಉಪವಿಭಾಗಾಧಿಕಾರಿ ಜಗದೀಶ್‌, ತಹಶೀಲ್ದಾರ್‌ ಜಿಎ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀನಾರಾಯಣ, ಕೆ.ಸಿ.ಮಂಜುನಾಥ್‌, ರಾಧಮ್ಮ ಮುನಿರಾಜು, ತಾ.ಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕ ಅಧ್ಯಕ್ಷ ಚಿನ್ನಪ್ಪ, ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕ ಅಧ್ಯಕ್ಷ ಸೋಮಣ್ಣ, ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.