ADVERTISEMENT

ವೈಜ್ಞಾನಿಕ ಕಸ ವಿಲೇವಾರಿಗೆ ಸೂಚನೆ

ದೊಡ್ಡಬಳ್ಳಾಪುರದಲ್ಲಿ ಪೌರಕಾರ್ಮಿಕರಿಗೆ ಘನತ್ಯಾಜ್ಯ ನಿರ್ವಹಣೆಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 11:09 IST
Last Updated 30 ಜೂನ್ 2015, 11:09 IST
ವೈಜ್ಞಾನಿಕ ಕಸ ವಿಲೇವಾರಿಗೆ ಸೂಚನೆ
ವೈಜ್ಞಾನಿಕ ಕಸ ವಿಲೇವಾರಿಗೆ ಸೂಚನೆ   

ದೊಡ್ಡಬಳ್ಳಾಪುರ: ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಹೊರತು ಎಷ್ಟೇ ಸ್ಥಳ  ಇದ್ದರೂ ಉಪಯೋಗ ಇಲ್ಲದಾಗುತ್ತದೆ. ವೈಜ್ಞಾನಿಕ ಕಸ ವಿಲೇವಾರಿ ಮಾಡುವಲ್ಲಿ ಸಾರ್ವಜನಿಕರೊಂದಿಗೆ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನಾಧಿಕಾರಿ ಭಾವನಾ ಹೇಳಿದರು.

ನಗರದಲ್ಲಿ  ಸೋಮವಾರ ನಗರಸಭೆ ಹಾಗೂ ಮೈತ್ರಿ ಸರ್ವ ಸೇವಾ ಸಮಿತಿ ವತಿಯಿಂದ ಪೌರಕಾರ್ಮಿಕರಿಗೆ ನಡೆದ ಘನತ್ಯಾಜ್ಯ ನಿರ್ವಹಣೆಗಾಗಿ ಮಾಹಿತಿ ಶಿಕ್ಷಣ ಹಾಗೂ ಸಂವಹನದಲ್ಲಿ ಮಾತನಾಡಿದರು.

ಕಸ ವಿಲೇವಾರಿ ಎಂದರೆ ನಮ್ಮಲ್ಲಿನ ಕಸವನ್ನು ಬೇರೆಡೆ ಸುರಿಯುವುದು ಎಂದಾಗಿತ್ತು. ಆದರೆ ಈಗ ವೈಜ್ಞಾನಿಕವಾಗಿ ಕಸವನ್ನು ವಿಂಗಡನೆ ಮಾಡದಿದ್ದರೆ, ಕಸದ್ದೇ ದೊಡ್ಡ ಸಮಸ್ಯೆಯಾಗುತ್ತದೆ. ಇದಕ್ಕೆ ಮಂಡೂರು, ಗುಂಡ್ಲಹಳ್ಳಿಯ ಕಸ ವಿಲೇವಾರಿ ಘಟಕಗಳೇ ಸಾಕ್ಷಿಯಾಗಿವೆ. ಸಾರ್ವಜನಿಕರು ಸಹ ಕಸ ವಿಂಗಡನೆಗೆ ಸಹಕಾರ ನೀಡಬೇಕು. ಪೌರ ಕಾರ್ಮಿಕರು ಸಾರ್ವಜನಿಕರಿಗೆ ಕಸ ವಿಂಗಡನೆ ಬಗ್ಗೆ ಮಾಹಿತಿ ನೀಡೇಕು ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್. ಪ್ರಭುದೇವ್ ಮಾತನಾಡಿ, ನಗರಸಭೆ ಕಸ ವಿಲೇವಾರಿಗೆ ಅಗತ್ಯ ಭೂಮಿ ಇದೆ. ಕಸ ಸಂಗ್ರಹಿಸಲು ಈಗ ಇರುವ ವಾಹನಗಳ ಜೊತೆಗೆ ಹೆಚ್ಚುವರಿಯಾಗಿ  4 ಟಿಪ್ಪರ್ ಆಟೊಗಳು, 42 ಗಾಡಿಗಳನ್ನು ನೀಡಲಾಗಿದೆ ಎಂದು ಹೇಳಿದರು.

20 ಪೌರ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಪೌರ ಕಾರ್ಮಿಕರು ತಮಗೆ ನೀಡಿರುವ ಪರಿಕರಗಳನ್ನು ಸರಿಯಾಗಿ ಬಳಸಿಕೊಂಡು ಕಸ ವಿಲೇವಾರಿ ಮಾಡುವಂತೆ  ಅವರು ಸಲಹೆ ನೀಡಿದರು.

ಪೌರಾಯುಕ್ತ ಕೆ.ನರಸಿಂಹಮೂರ್ತಿ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ವಚ್ಛ ಭಾರತ ಅಭಿಯಾನದಡಿ ಪೌರ ಕಾರ್ಮಿಕರಿಗೆ ಘನತ್ಯಾಜ್ಯ ವಿಲೇವಾರಿ ಕುರಿತಂತೆ ತರಬೇತಿ ನೀಡಲಾಗುತ್ತಿದೆ. ಮನೆಗಳಿಂದ ಕಸ ಸಂಗ್ರಹಿಸುವಾಗಲೇ ಕಸವನ್ನು ಪ್ರತ್ಯೇಕಿಸಿ ಸಂಗ್ರಹಿಸಬೇಕು. ಈ ಬಗ್ಗೆ ನಮ್ಮೊಂದಿಗೆ ಸಹಕರಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ ನೀರು ಮತ್ತು ನೈರ್ಮಲ್ಯ ತಜ್ಞ ಕೆ.ಗುರುದೇವ್, ಸಹ ನಿರ್ದೇಶಕ ಹರೀಶ್ ಬಾಬು, ಸಂಯೋಜಕಿ ಗೌರಮ್ಮ,ನಗರಸಭೆಯ ಪರಿಸರ ಅಭಿಯಂತರ ರಮೇಶ್, ಆರೋಗ್ಯ ನಿರೀಕ್ಷಕರಾದ ಸುಧಾ, ರೂಪಾ   ಭಾಗವಹಿಸಿದ್ದರು.

ಮನೆಗಳಿಂದ ಕಸ ಸಂಗ್ರಹಿಸುವಾಗಲೇ ಕಸವನ್ನು ಪ್ರತ್ಯೇಕಿಸಿ ಸಂಗ್ರಹಿಸಬೇಕು. ಈ ಬಗ್ಗೆ  ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡಬೇಕು.
ಕೆ.ನರಸಿಂಹಮೂರ್ತಿ,
ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.