ADVERTISEMENT

ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 11:21 IST
Last Updated 14 ಜುಲೈ 2017, 11:21 IST
ಕನಸವಾಡಿ ಶನಿಮಹಾತ್ಮ ದೇವಸ್ಥಾನ ಅನ್ನದಾಸೋಹ ಭವನದಲ್ಲಿ ಗುರುವಾರ ರಂಗಮ್ಮ,ವಿ.ತಿಮ್ಮಯ್ಯ ಸ್ಮರಣಾರ್ಥ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನೋಟ್‌ ಪುಸ್ತಕ ವಿತರಣೆ ನಡೆಯಿತು
ಕನಸವಾಡಿ ಶನಿಮಹಾತ್ಮ ದೇವಸ್ಥಾನ ಅನ್ನದಾಸೋಹ ಭವನದಲ್ಲಿ ಗುರುವಾರ ರಂಗಮ್ಮ,ವಿ.ತಿಮ್ಮಯ್ಯ ಸ್ಮರಣಾರ್ಥ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನೋಟ್‌ ಪುಸ್ತಕ ವಿತರಣೆ ನಡೆಯಿತು   

ಕನಸವಾಡಿ (ದೊಡ್ಡಬಳ್ಳಾಪುರ): ‘ದೇಶದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿದ್ದರೆ ಮಾತ್ರ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ’ ಎಂದು ತುಮಕೂರು ರಾಮಕೃಷ್ಣಸ್ವಾಮಿ ವಿವೇಕಾನಂದ ಆಶ್ರಮದ ಪೀಠಾಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮಿ ಹೇಳಿದರು.

ತಾಲ್ಲೂಕಿನ ಕನಸವಾಡಿ ಶನಿಮಹಾತ್ಮ ದೇವಸ್ಥಾನ ಅನ್ನದಾಸೋಹ ಭವನದಲ್ಲಿ ಗುರುವಾರ ರಂಗಮ್ಮ,ವಿ.ತಿಮ್ಮಯ್ಯ ಸ್ಮರಣಾರ್ಥ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನೋಟ್‌ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಗತ್ತು ಎಂದಿಗೂ ಸಹ ವಿದ್ಯಾವಂತರಿಗೆ ಮಣಿಯುವುದು, ಗೌರವಿಸುವುದು ಅಧಿಕಾರಕ್ಕೆ ಅಲ್ಲ’ ಎಂದರು. ಜ್ಞಾನಿಗಳಿಗೆ ಎಲ್ಲ ಕಡೆಯಲ್ಲೂ ಪೂಜ್ಯನೀಯ ಸ್ಥಾನ ದೊರೆಯುತ್ತದೆ. ಹಣವಂತರಿಗಿಂತಲೂ ವಿದ್ಯಾವಂತರ ಸ್ವಾಭಿಮಾನಿಗಳಾಗಿರುತ್ತಾರೆ. ಅಂಕಗಳಿಕೆ ಶ್ರೀಮಂತಿಕೆಯ ಜೊತೆಗೆ ಯೋಗ್ಯವಾದ ಮಾರ್ಗ ಕಲಿಯಬೇಕು ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಒಂದು ಉತ್ತಮ  ಶಾಲೆ ತೆರೆದರೆ 100 ಜೈಲುಗಳನ್ನು ಮುಚ್ಚಿದಂತೆ ಆಗುತ್ತದೆ. ಬಡತನ ಯಾವತ್ತೂ ಶಾಪವಲ್ಲ. ಆದರೆ ಸೋಮಾರಿತನ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವಿಕೆ ಮನುಷ್ಯನನ್ನು ಅವಸಾನದ ಕಡೆಗೆ ತಳ್ಳುತ್ತದೆ’ ಎಂದರು.

ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ. ವೆಂಕಟರಮಣಯ್ಯ,  ‘ವಿದ್ಯಾ ಕ್ಷೇತ್ರಕ್ಕೆ ತಾಲ್ಲೂಕಿನಲ್ಲಿ ಪ್ರಥಮ ಆದ್ಯತೆ ನೀಡಲಾಗಿದೆ. ಇದರ ಸಲುವಾಗಿಯೇ ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜಿಗೆ ಪ್ರತ್ಯೇಕ  ಕೊಠಡಿಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ’ ಎಂದರು.

ಅಧ್ಯಕ್ಷತೆಯನ್ನು ಎಪಿಎಂಸಿ ಉಪಾಧ್ಯಕ್ಷ ಟಿ.ಮಂಜುನಾಥ್‌ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರಪ್ಪ, ಶಿವಕುಮಾರ್‌, ಚನ್ನಮ್ಮರಾಮಲಿಂಗಯ್ಯ, ಶನಿಮಹಾತ್ಮಸ್ವಾಮಿ ದೇವಸ್ಥಾನ ಆಡಳಿತ ಮಂಡಲಿ ಅಧ್ಯಕ್ಷ ಜಿ.ಗೋಪಿನಾಥ್‌, ಕಾರ್ಯದರ್ಶಿ ಆರ್‌.ನರಸಿಂಹಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಕನಸವಾಡಿ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ರಾಮಚಂದ್ರ, ಕನಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ ಶಿವಕುಮಾರ್‌, ಚನ್ನಾದೇವಿ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಸುಮಿತ್ರ ಮಂಜುನಾಥ್‌, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ಪ್ರಕಾಶ್‌, ಯುವ ಕಾಂಗ್ರೆಸ್‌ ತಾಲ್ಲೂಕು ಮಾಜಿ ಅಧ್ಯಕ್ಷ ಸಿದ್ದಬೈರೇಗೌಡ ಹಾಜರಿದ್ದರು.

* * 

ಸಿಇಟಿ ಕೇಂದ್ರವನ್ನು ನಗರದಲ್ಲಿ ತೆರೆಯುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ಸಲ ಸಾಸಲುನಲ್ಲಿ ಪಿಯು ಕಾಲೇಜು ಆರಂಭಿಸಲಾಗುತ್ತದೆ
ಟಿ.ವೆಂಕಟರಮಣಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.